ಲಿಂಗಸುಗೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ-ಗ್ರೂಪ್ ನೌಕರರ ಸೇವೆಯನ್ನು ಅಕ್ಟೋಬರ್ 31ರ ನಂತರವೂ ಮುಂದುವರಿಸಬೇಕು ಹಾಗೂ ಯಾವುದೇ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಡಿ-ಗ್ರೂಪ್ ನೌಕರರ ಸಂಘದ ಸದಸ್ಯರು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಮಾತನಾಡಿ, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಉದ್ಯೋಗದ ಅಭದ್ರತೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕಾಲೇಜುಗಳ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಸಿಬ್ಬಂದಿಯ ಸೇವೆಯನ್ನು ಮುಂದುವರಿಸುವ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಸೆಪ್ಟೆಂಬರ್ 19, 2026ರಂದು ಹಾಗೂ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಸೆಪ್ಟೆಂಬರ್ 29, 2026ರಂದು ಹೊರಡಿಸಿರುವ ಆದೇಶಗಳ ಅನ್ವಯ, ಇಲಾಖೆಯ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ-ಗ್ರೂಪ್ ಸಿಬ್ಬಂದಿಯ ಸೇವೆಯನ್ನು ಅಕ್ಟೋಬರ್ 31, 2026ರವರೆಗೆ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ಆದರೆ, ನಿಗದಿತ ಅವಧಿ ಮುಕ್ತಾಯವಾದ ನಂತರ ಹೊರಗುತ್ತಿಗೆ ನೌಕರರ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ, ಅಕ್ಟೋಬರ್ 31ರ ನಂತರ ಸಂಬಂಧಪಟ್ಟ ಸಿಬ್ಬಂದಿಯನ್ನು ಬಿಡುಗಡೆಗೊಳಿಸಲು ಅಥವಾ ಸಂಬಂಧಪಟ್ಟ ಕಾಲೇಜಿಗೆ ಹಿಂದಿರುಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ವ್ಯಾಪ್ತಿಯ ಸಹಬಟವಾಡೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ನೌಕರರು ತಮ್ಮ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಿ-ಗ್ರೂಪ್ ನೌಕರರ ಅನುಭವ, ಸೇವೆ ಹಾಗೂ ಅವರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಪರಿಗಣಿಸಬೇಕು. ಏಕಾಏಕಿ ಸೇವೆಯಿಂದ ಬಿಡುಗಡೆಗೊಳಿಸಿದರೆ ನೌಕರರು ಮತ್ತು ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೊರಗುತ್ತಿಗೆ ನೌಕರರ ಸೇವೆ ಮುಂದುವರಿಸುವ ಕುರಿತು ಸರ್ಕಾರದಿಂದ ಮುಂದಿನ ನಿರ್ದೇಶನ ಅಥವಾ ಅಂತಿಮ ನಿರ್ಧಾರ ಬರುವವರೆಗೆ ಹಾಲಿ ಸಿಬ್ಬಂದಿಯನ್ನು ಕರ್ತವ್ಯದಲ್ಲಿ ಮುಂದುವರಿಸಬೇಕು. ಯಾವುದೇ ನೌಕರರನ್ನು ಮಧ್ಯಂತರದಲ್ಲಿ ಕೆಲಸದಿಂದ ಬಿಡುಗಡೆಗೊಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ತಮ್ಮ ಮನವಿಯನ್ನು ಉನ್ನತ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು, ಹೊರಗುತ್ತಿಗೆ ಡಿ-ಗ್ರೂಪ್ ನೌಕರರ ಉದ್ಯೋಗ ಭದ್ರತೆ ಹಾಗೂ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಮರೇಶ್, ಬಸವರಾಜ್ ನಾಯಕ್, ಶರಣ್ಯ, ನಾಗಯ್ಯ, ನಾಗಪ್ಪ ಸೇರಿದಂತೆ ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.