ದೇವದುರ್ಗ: ಕ್ರಾಂತಿಕಾರಿ ಕವಿ ಹಾಗೂ ಗಾನ ಗಾರುಡಿಗ ಆರ್. ಹುಚ್ಚರೆಡ್ಡಿ ಅವರ ಎರಡನೇ ವರ್ಷದ ನುಡಿನಮನ ಕಾರ್ಯಕ್ರಮವನ್ನು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ (ಆರ್ಸಿಎಫ್) ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹುಚ್ಚರೆಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಅವರ ಸಾಹಿತ್ಯ, ಸಂಗೀತ ಹಾಗೂ ಸಾಮಾಜಿಕ ಹೋರಾಟದ ಕೊಡುಗೆಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರಿ, ಹುಚ್ಚರೆಡ್ಡಿ ಅವರು ತಮ್ಮ ಕ್ರಾಂತಿಕಾರಿ ಹಾಡುಗಳು ಹಾಗೂ ತಮಟೆ ವಾದನದ ಮೂಲಕ ಜನಸಾಮಾನ್ಯರ ಮನಗೆದ್ದ ಕಲಾವಿದರಾಗಿದ್ದರು. ಅವರು ತಮಟೆ ಬಾರಿಸಲು ಆರಂಭಿಸಿದರೆ ರಸ್ತೆಯಲ್ಲಿ ಸಾಗುತ್ತಿದ್ದ ಜನರೂ ನಿಂತು ಆಲಿಸುತ್ತಿದ್ದರು. ಅವರ ಹಾಡುಗಳಲ್ಲಿ ಸಮಾಜದ ನೋವು, ಶೋಷಿತರ ಸಂಕಷ್ಟ ಹಾಗೂ ಜನಪರ ಕಾಳಜಿ ಪ್ರತಿಧ್ವನಿಸುತ್ತಿತ್ತು ಎಂದು ಸ್ಮರಿಸಿದರು.
ಹುಚ್ಚರೆಡ್ಡಿ ಅವರ ಕಂಠದಿಂದ ಹೊರಹೊಮ್ಮುತ್ತಿದ್ದ ಹಾಡುಗಳು ಕೇಳುಗರಲ್ಲಿ ರೋಮಾಂಚನ ಮೂಡಿಸುತ್ತಿದ್ದವು. ವಿಶೇಷವಾಗಿ ‘ಚೂರು ಚೂರಾಯಿತೋ ರಾಯಚೂರು, ಚೋರರ ಪಾಲಾಯಿತೋ ರಾಯಚೂರು’ ಎಂಬ ಹಾಡು ಇಂದಿಗೂ ತಮ್ಮ ನೆನಪಿನಲ್ಲಿ ಉಳಿದಿದೆ. ಅವರ ಹಾಡುಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜದ ವಾಸ್ತವ ಸ್ಥಿತಿಯನ್ನು ಜನರ ಮುಂದಿಡುವ ಶಕ್ತಿಯನ್ನು ಹೊಂದಿದ್ದವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬುರ್ರಪ್ಪ ಮರೆಡ್ಡಿ ಗಬ್ಬೂರು, ಬಸವರಾಜ ಜಯಂ, ನರಸಣ್ಣಗೌಡ ಬಿ. ಗಣೆಕಲ್, ಡೇವಿಡ್ ಮೇತ್ರಿ ಮಸರಕಲ್, ವೆಂಕಟೇಶ ಜಾಲಹಳ್ಳಿ, ಲಕ್ಷ್ಮಣ ಮಸರಕಲ್, ವಿಜಯಕುಮಾರ ಬಲ್ಲಿದವ, ಭೀಮಣ್ಣ ಅಂಜಳ ಜಾಲಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಹುಚ್ಚರೆಡ್ಡಿ ಅವರಿಗೆ ನುಡಿನಮನ ಸಲ್ಲಿಸಿದರು.



