ದೇವದುರ್ಗ: ವೀರ ಸ್ವಾತಂತ್ರ್ಯ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘದ ರಾಯಚೂರು ಜಿಲ್ಲಾಧ್ಯಕ್ಷರಾಗಿ ಕುಪ್ಪಣ್ಣ ಭೋವಿ ಆಲ್ಕೋಡ ಅವರನ್ನು ನೇಮಕ ಮಾಡಲಾಗಿದೆ.

ಕುಪ್ಪಣ್ಣ ಭೋವಿ ಅವರ ನಾಡಾಭಿಮಾನ, ಉತ್ತಮ ನಡೆನುಡಿ, ಸಾಮಾಜಿಕ ಕಳಕಳಿ ಹಾಗೂ ದಲಿತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗೆಗಿನ ಆಸಕ್ತಿಯನ್ನು ಪರಿಗಣಿಸಿ ಈ ಜವಾಬ್ದಾರಿ ನೀಡಲಾಗಿದೆ ಎಂದು ಸಂಘಟನೆಯ ರಾಜ್ಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಆದ್ಯತೆ ನೀಡಿ, ಸಂಘಟನೆಯ ಉದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಬುದ್ಧ, ಬಸವೇಶ್ವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ತ್ವಾದರ್ಶಗಳನ್ನು ಅನುಸರಿಸಿ, ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಸಂಘಟನೆಯ ತತ್ತ್ವಸಿದ್ಧಾಂತಗಳಿಗೆ ಬದ್ಧರಾಗಿ ಪ್ರಾಮಾಣಿಕ ನಾಯಕತ್ವದ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.

ಸಂಘದ ರಾಜ್ಯಾಧ್ಯಕ್ಷ ತಿಪ್ಪಣ್ಣ ಕಲ್ಲೋಳಪ್ಪ ಬಂಡಿ ವಡ್ಡರ, ರಾಜ್ಯ ಉಪಾಧ್ಯಕ್ಷ ರಾಜು ಮುಕುಂದ ವಡ್ಡರ ಹಾಗೂ ರಾಜ್ಯ ಕಾರ್ಯದರ್ಶಿ ಹನುಮಂತ ದುರ್ಗಪ್ಪ ವಡ್ಡರ ಅವರು ಕುಪ್ಪಣ್ಣ ಭೋವಿ ಆಲ್ಕೋಡ ಅವರ ನೇಮಕಾತಿ ಆದೇಶ ಹೊರಡಿಸಿದ್ದಾರೆ.