ಹಟ್ಟಿ ಚಿನ್ನದ ಗಣಿ: ಪಟ್ಟಣದ 12ನೇ ವಾರ್ಡ್‌ನ ಅಬ್ದುಲ್ ಕಾಲೋನಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಚರಂಡಿಯಿಂದ ತ್ಯಾಜ್ಯ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ಅನುಭವಿಸುತ್ತಿದ್ದ ಸಂಕಷ್ಟದ ಕುರಿತು ತುಂಗ ಬಿಂಬ ಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಪಟ್ಟಣ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ಅಬ್ದುಲ್ ಕಾಲೋನಿಯಲ್ಲಿ ಸಮರ್ಪಕವಾಗಿ ಚರಂಡಿ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ಮನೆಗಳೊಳಗೆ ನುಗ್ಗುತ್ತಿತ್ತು. ಕಳೆದ ಆರು ದಿನಗಳಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಚರಂಡಿ ನೀರಿನ ದುರ್ವಾಸನೆ, ಸೊಳ್ಳೆಗಳ ಕಾಟ ಹಾಗೂ ಅನೈರ್ಮಲ್ಯದಿಂದ ಸ್ಥಳೀಯರಲ್ಲಿ ಅನಾರೋಗ್ಯದ ಆತಂಕ ಉಂಟಾಗಿತ್ತು. ಸಮಸ್ಯೆಯ ಕುರಿತು ಹಲವು ಬಾರಿ ಗಮನ ಸೆಳೆದರೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ತುಂಗ ಬಿಂಬ ಪತ್ರಿಕೆ ಅಕ್ಟೋಬರ್ 17ರಂದು 'ಚರಂಡಿ ನಿರ್ಮಾಣದಿಂದ ತ್ಯಾಜ್ಯ ನೀರು ಮನೆ ಒಳಗೆ ನುಗ್ಗಿ ದುರ್ವಾಸನೆಗೆ ಸ್ಥಳೀಯ ನಿವಾಸಿಗಳ ಪರದಾಟ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ನಿವಾಸಿಗಳ ಸಂಕಷ್ಟವನ್ನು ಅಧಿಕಾರಿಗಳ ಗಮನಕ್ಕೆ ತಂದಿತ್ತು.

ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದರು. ಬಳಿಕ ಜೆಸಿಬಿ ಯಂತ್ರದ ಸಹಾಯದಿಂದ ಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿ, ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ಅಗತ್ಯ ವ್ಯವಸ್ಥೆ ಮಾಡಿದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ತ್ವರಿತ ಕ್ರಮದಿಂದ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ದೊರೆತಿದ್ದು, ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದೇ ಸಮಸ್ಯೆ ಮರುಕಳಿಸದಂತೆ ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಸರಿಪಡಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜನಸಾಮಾನ್ಯರ ಸಮಸ್ಯೆಯನ್ನು ಬೆಳಕಿಗೆ ತಂದು ಅಧಿಕಾರಿಗಳು ಸ್ಪಂದಿಸುವಂತೆ ಮಾಡಿದ ತುಂಗ ಬಿಂಬ ಪತ್ರಿಕೆಯ ಸಂಪಾದಕರು ಹಾಗೂ ವರದಿಗಾರರಿಗೆ ಅಬ್ದುಲ್ ಕಾಲೋನಿಯ ನಿವಾಸಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.