ದೇವದುರ್ಗ, ಅ.18: ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವರ್ಗ–2ಬಿ (ಮುಸ್ಲಿಂ) ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸುವಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಮನವಿಗೆ ಜಿಲ್ಲಾಡಳಿತ ಹಿಂಬರಹ ನೀಡಿದ್ದು, ಪ್ರಸ್ತುತ ಮೀಸಲಾತಿ ಬದಲಾವಣೆಗೆ ಅವಕಾಶವಿಲ್ಲ ಎಂದು ತಿಳಿಸಿದೆ. ಈ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಜಾಲಹಳ್ಳಿ ಗ್ರಾಮ ಪಂಚಾಯಿತಿಯು ಒಟ್ಟು ಒಂಬತ್ತು ವಾರ್ಡ್ಗಳನ್ನು ಹೊಂದಿದ್ದು, ಅವುಗಳಲ್ಲಿ 2, 3, 4 ಹಾಗೂ 5ನೇ ವಾರ್ಡ್ಗಳಲ್ಲಿ ಪ್ರವರ್ಗ–2ಬಿ ಸಮುದಾಯದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೂ ಪ್ರಕಟಿತ ಮೀಸಲಾತಿ ಪಟ್ಟಿಯಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಜಾಲಹಳ್ಳಿ ನಿವಾಸಿ ಹುಸೇನ್ ಸಾಬ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ವಾರ್ಡ್ವಾರು ಜನಸಂಖ್ಯೆ, ಮತದಾರರ ವಿವರಗಳು ಹಾಗೂ ಸರ್ಕಾರದ ಮೀಸಲಾತಿ ಮಾರ್ಗಸೂಚಿಗಳನ್ನು ಪರಿಶೀಲಿಸಿ, ಅರ್ಹ ವಾರ್ಡ್ಗೆ ಪ್ರವರ್ಗ–2ಬಿ ಮೀಸಲಾತಿ ನಿಗದಿಪಡಿಸಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಆಗಸ್ಟ್ 17ರಂದು ಜಿಲ್ಲಾಡಳಿತಕ್ಕೆ ಮರುಪರಿಶೀಲನಾ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪರಿಶೀಲಿಸಿರುವ ಜಿಲ್ಲಾಡಳಿತ, 2026ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಮೀಸಲಾತಿಯನ್ನು ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳಲ್ಲಿನ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 1998ರ ಅನ್ವಯ ನಿಗದಿಪಡಿಸಲಾಗುತ್ತಿದೆ ಎಂದು ಹಿಂಬರಹದಲ್ಲಿ ತಿಳಿಸಿದೆ.
ಅರ್ಜಿದಾರರು ಕೋರಿರುವ ರೀತಿಯಲ್ಲಿ ಮೀಸಲಾತಿ ಬದಲಾಯಿಸಲು ಅವಕಾಶವಿಲ್ಲ. ಈ ನಿರ್ಧಾರದ ಕುರಿತು ಆಕ್ಷೇಪವಿದ್ದಲ್ಲಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಲ್ಲಿಕೆಯಾಗಿದ್ದ ಮನವಿಯನ್ನು ಈ ಹಂತದಲ್ಲಿ ಮುಕ್ತಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತದ ಈ ಉತ್ತರದಿಂದ ಮೀಸಲಾತಿ ಮರುಪರಿಶೀಲನೆಗೆ ಸಂಬಂಧಿಸಿದ ಮನವಿ ಸದ್ಯಕ್ಕೆ ಇತ್ಯರ್ಥಗೊಂಡಿದ್ದು, ಅರ್ಜಿದಾರರು ಮುಂದಿನ ಹಂತದಲ್ಲಿ ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಿ ಕಾನೂನುಬದ್ಧ ಪರಿಹಾರ ಪಡೆಯುವ ಅವಕಾಶವಿದೆ. ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಮೀಸಲಾತಿ ವಿಚಾರ ಗಮನ ಸೆಳೆದಿದೆ.



