ದೇವದುರ್ಗ: ಕವಿಗಳು ಸಮಾಜದಲ್ಲಿನ ವಾಸ್ತವ ಸಂಗತಿಗಳನ್ನು ಗುರುತಿಸಿ, ಅವುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಹಿತ್ಯವು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಜನರ ಬದುಕಿಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಹಿಳಾ ಉಪಾಧ್ಯಕ್ಷೆ ಶ್ರೀದೇವಿ ರಾಜಶೇಖರ ನಾಯಕ ಹೇಳಿದರು.
ಪಟ್ಟಣದ ಸ್ನೇಹ ಮೆಲೋಡಿಸ್ ಸಿಂಗಿಂಗ್ ಕರೋಕೆ ಸ್ಟುಡಿಯೋದಲ್ಲಿ ಕರ್ನಾಟಕ ರಕ್ಷಣಾ ಸೇನೆ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಬೆಂಕು ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ಕವನಯಾನ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಾತ ಎ. ವೆಂಕಟೇಶ ನಾಯಕ ಅವರು ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಅವರ ಪ್ರಭಾವದಿಂದಲೇ ನನಗೂ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಯಿತು. ದೇವದುರ್ಗ ತಾಲೂಕಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಸಾಕಷ್ಟು ಪ್ರತಿಭಾವಂತ ಕವಿಗಳಿದ್ದು, ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ಒದಗಿಸುವ ಜವಾಬ್ದಾರಿ ಕನ್ನಡಪರ ಸಂಘಟನೆಗಳ ಮೇಲಿದೆ. ತಮಗೂ ಬಿಡುವಿನ ವೇಳೆಯಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಹವ್ಯಾಸವಿದೆ. ಪತಿ ರಾಜಶೇಖರ ನಾಯಕ ಅವರೊಂದಿಗೆ ಕೆಲವೊಮ್ಮೆ ಉಂಟಾಗುವ ಮುನಿಸಿಗೂ ಕವನದ ಮೂಲಕವೇ ಉತ್ತರಿಸುವ ಅಭ್ಯಾಸವಿದೆ ಎಂದು ಹೇಳುವ ಮೂಲಕ ಸಭಿಕರಲ್ಲಿ ನಗು ಮೂಡಿಸಿದರು.
ದೇವದುರ್ಗ ತಾಲೂಕಿಗೆ ಇದುವರೆಗೂ ಲಭಿಸದ ರಾಜ್ಯೋತ್ಸವ ಪ್ರಶಸ್ತಿ ದೊರೆಯುವಂತೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ ಅವರು, ಸ್ಥಳೀಯ ಸಾಹಿತಿಗಳು ಮತ್ತು ಕಲಾವಿದರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಮುನಿಯಪ್ಪ ನಾಗೋಲಿ, ಶಿವರಾಯ ಅಕ್ಕರಿಕಿ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಹಾಗೂ ನಿವೃತ್ತ ಶಿಕ್ಷಕ ಲಕ್ಷ್ಮಣ ನಾಯಕ ಮಾತನಾಡಿ, ಸಾಹಿತ್ಯದ ಬೆಳವಣಿಗೆಯಲ್ಲಿ ಕವಿಗೋಷ್ಠಿಗಳ ಪಾತ್ರ ಮತ್ತು ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಅಗತ್ಯವನ್ನು ವಿವರಿಸಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗಜಲ್ ಕವಿ ಅಭಿಷೇಕ್ ಬಳೆ ಮಸರಕಲ್ ಮಾತನಾಡಿ, ಕಾವ್ಯ ರಚನೆ ಕೇವಲ ಪದಗಳ ಜೋಡಣೆಯಲ್ಲ. ಅದಕ್ಕೆ ಆಳವಾದ ಚಿಂತನೆ, ಅನುಭವ ಮತ್ತು ಸಾಮಾಜಿಕ ಕಾಳಜಿ ಅಗತ್ಯವಾಗಿದೆ. ಕವಿಗಳು ತಮ್ಮ ಸುತ್ತಮುತ್ತಲಿನ ಬದುಕನ್ನು ಸೂಕ್ಷ್ಮವಾಗಿ ಗಮನಿಸಿ, ಜನರ ನೋವು-ನಲಿವುಗಳಿಗೆ ಧ್ವನಿಯಾಗಬೇಕು ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ 16 ಕವಿಗಳು ವಿಭಿನ್ನ ವಿಷಯಗಳ ಕುರಿತು ರಚಿಸಿದ ಕವನಗಳನ್ನು ವಾಚಿಸಿದರು. ಸಮಾಜದ ಅಂಕುಡೊಂಕುಗಳು, ನಾಡಿನ ಹೆಮ್ಮೆಯ ರಾಜಮನೆತನಗಳ ಪರಿಚಯ ಹಾಗೂ ಜನಜೀವನದ ವಾಸ್ತವ ಸಂಗತಿಗಳನ್ನು ಪ್ರತಿಬಿಂಬಿಸುವ ಕವನಗಳು ಗಮನ ಸೆಳೆದವು. ಕವಿಗಳು ತಮ್ಮ ರಚನೆಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಜೊತೆಗೆ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನೂ ಅನಾವರಣಗೊಳಿಸಿದರು ಎಂದು ಅಭಿಷೇಕ್ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಗಟ್ಟಿಯಾದ ಕಾವ್ಯ ಪರಂಪರೆಯಿದ್ದು, ಇಲ್ಲಿನ ಕವಿಗಳ ರಚನೆಗಳು ಜನಸಾಮಾನ್ಯರನ್ನು ತಲುಪಬೇಕು. ಕವಿತೆಗಳು ಕೇವಲ ವೇದಿಕೆಗಳಿಗೆ ಸೀಮಿತವಾಗದೆ ಓದುಗರ ಮನಸ್ಸನ್ನು ಮುಟ್ಟುವಂತಿರಬೇಕು. ಉತ್ತಮ ಕಾವ್ಯ ರಚನೆಗಾಗಿ ಕವಿಗಳು ತಪಸ್ಸು ಮತ್ತು ಧ್ಯಾನದಂತೆ ಸಮಯ ಮೀಸಲಿಟ್ಟು ಅಧ್ಯಯನ, ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಕವಿಗಳು ಅಹಂಕಾರ ಮತ್ತು ವೇದಿಕೆಯ ವ್ಯಾಮೋಹದಿಂದ ದೂರವಿರಬೇಕು. ಹಾರ, ತುರಾಯಿ ಹಾಗೂ ಸನ್ಮಾನಗಳಿಗಿಂತ ಸಾಹಿತ್ಯದ ಗುಣಮಟ್ಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಾರ್ಯಕ್ರಮಗಳಿಗೆ ಕಷ್ಟಪಟ್ಟು ಬರುವ ಮನೋಭಾವಕ್ಕಿಂತ ಸಾಹಿತ್ಯದ ಮೇಲಿನ ಪ್ರೀತಿಯಿಂದ ಭಾಗವಹಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸ್ಥಳೀಯ ಪತ್ರಿಕೆಗಳು ಕವಿಗಳ ಕಥೆ, ಕವನ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಶೇಷವಾಗಿ ಗಜಲ್ ರಚನೆಯಲ್ಲಿ ಶಿಸ್ತು, ಲಯ ಹಾಗೂ ಭಾಷೆಯ ಬಳಕೆಗೆ ಹೆಚ್ಚಿನ ಗಮನ ನೀಡಬೇಕು. ಗಜಲ್ನ ಮೂಲ ಸ್ವರೂಪ ಮತ್ತು ಸಾಹಿತ್ಯಿಕ ನಿಯಮಗಳನ್ನು ಅರಿತು ಬರೆಯುವುದು ಅಗತ್ಯ ಎಂದು ತಿಳಿಸಿದರು.
ಕಾವ್ಯಕ್ಕೆ ತನ್ನದೇ ಆದ ಅರ್ಥ, ಭಾವ ಮತ್ತು ವ್ಯಾಖ್ಯಾನವಿರುತ್ತದೆ. ಪ್ರತಿಯೊಂದು ಕವಿತೆಯೂ ವಿಭಿನ್ನ ಸಾಹಿತ್ಯಿಕ ದೃಷ್ಟಿಕೋನವನ್ನು ಒಳಗೊಂಡಿರುತ್ತದೆ. ಕಾವ್ಯದಲ್ಲಿ ಅಂತರಂಗದ ಭಾವನೆ, ಕರುಣೆ ಹಾಗೂ ಮಾನವೀಯ ಸಂವೇದನೆಗಳು ವ್ಯಕ್ತವಾಗಬೇಕು. ಅಂತಹ ಸಾಹಿತ್ಯ ಮಾತ್ರ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯ ಎಂದು ಅಭಿಷೇಕ್ ಬಳೆ ಮಸರಕಲ್ ಅಭಿಪ್ರಾಯಪಟ್ಟರು.



