ಮಾನ್ವಿ: ಮಳೆ ಕೊರತೆಯಿಂದ ಕೃಷಿಯಲ್ಲಿ ನಿರೀಕ್ಷಿತ ಬೆಳೆ ಬಾರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯುವ ರೈತರೊಬ್ಬರು ಸಾಲದ ಹೊರೆಯಿಂದ ಮನನೊಂದು ವಿಷ ಸೇವಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ನಡೆದಿದೆ.
ನಕ್ಕುಂದಿ ಗ್ರಾಮದ ಸಿದ್ದನಗೌಡ (33) ಮೃತಪಟ್ಟ ರೈತ. ಕೃಷಿಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದ ಇವರು, ಜೀವನೋಪಾಯಕ್ಕಾಗಿ ಗ್ರಾಮದಲ್ಲಿ ಸಣ್ಣ ಅಂಗಡಿಯನ್ನೂ ನಡೆಸುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಕೃಷಿಯಲ್ಲಿ ಎದುರಾದ ತೊಂದರೆಗಳು ಹಾಗೂ ಪ್ರಸಕ್ತ ವರ್ಷದ ಮಳೆ ಕೊರತೆಯಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎನ್ನಲಾಗಿದೆ.
ಸಿದ್ದನಗೌಡ ಅವರ ಜಮೀನಿನ ಮೇಲೆ ಸುಮಾರು ₹2.06 ಲಕ್ಷ ಸಾಲವಿದ್ದು, ವಿವಿಧ ಸಹಕಾರಿ ಬ್ಯಾಂಕ್ಗಳು ಹಾಗೂ ಕೈಗಡವಾಗಿ ಪಡೆದ ಹಣ ಸೇರಿ ಸುಮಾರು ₹10ರಿಂದ ₹12 ಲಕ್ಷದವರೆಗೆ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಕುಟುಂಬದ ನಾಲ್ವರು ಸಹೋದರಿಯರ ವಿವಾಹಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದ ಅವರು, ಸಾಲ ತೀರಿಸುವ ಉದ್ದೇಶದಿಂದ ಮನೆ ಆಸ್ತಿ ಹಾಗೂ ಆರು ಎಕರೆ ಕೃಷಿ ಜಮೀನನ್ನೂ ಮಾರಾಟ ಮಾಡಿದ್ದರು ಎನ್ನಲಾಗಿದೆ.
ಈ ವರ್ಷ ಸಮರ್ಪಕ ಮಳೆಯಾಗದೆ ಬೆಳೆ ಕೈಕೊಟ್ಟಿದ್ದರಿಂದ ಉಳಿದ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿ ಸಿದ್ದನಗೌಡ ತೀವ್ರವಾಗಿ ನೊಂದಿದ್ದರು ಎಂದು ಹೇಳಲಾಗಿದೆ.
ಸೆಪ್ಟೆಂಬರ್ 8ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಹೊಲದಲ್ಲಿ ಕೃಷಿಗೆ ಬಳಸುವ ಕೀಟನಾಶಕ ಸೇವಿಸಿದ್ದರು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಅವರನ್ನು ಬ್ಯಾಗವಾಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆಯಂತೆ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಿದ್ದನಗೌಡ, ಅಕ್ಟೋಬರ್ 19ರಂದು ಸಂಜೆ 6.19ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಮಳೆ ಕೊರತೆ, ಬೆಳೆ ನಷ್ಟ ಹಾಗೂ ಸಾಲದ ಹೊರೆ ಯುವ ರೈತನ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು ಎನ್ನಲಾಗಿದ್ದು, ಸಿದ್ದನಗೌಡ ಅವರ ಅಕಾಲಿಕ ಸಾವಿನಿಂದ ಕುಟುಂಬಸ್ಥರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ಘಟನೆಯಿಂದ ನಕ್ಕುಂದಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.



