ಮಾನ್ವಿ: ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಮಹನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸುವ ಮೂಲಕ ಅವರ ಜೀವನ ಚರಿತ್ರೆ, ತತ್ವಾದರ್ಶಗಳು ಹಾಗೂ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಅಕ್ಟೋಬರ್ 21ರಂದು ಆಯೋಜಿಸಿದ್ದ ಶ್ರೀಜಗದ್ಗುರು ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶ್ರೀ ಮಧ್ವಾಚಾರ್ಯರು ನಾಡಿನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ತತ್ವಗಳು ಮತ್ತು ಬೋಧನೆಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ. ವಿವಿಧ ಸಮುದಾಯಗಳ ಮಹನೀಯರ ಜಯಂತಿಗಳನ್ನು ಆಚರಿಸುವುದರಿಂದ ಅವರ ಸಾಧನೆ ಮತ್ತು ಚಿಂತನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಜೀವನ ಮತ್ತು ತತ್ವಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ. ವಿಜಯರಾವ್ ಕುಪನೇಶಿ ಮಾತನಾಡಿ, ಶ್ರೀ ಮಧ್ವಾಚಾರ್ಯರು ಕ್ರಿ.ಶ. 1238ರಲ್ಲಿ ಉಡುಪಿ ಸಮೀಪದ ಪಾಜಕ ಕ್ಷೇತ್ರದಲ್ಲಿ ಜನಿಸಿದರು. ಸಂಪ್ರದಾಯದ ನಂಬಿಕೆಯಂತೆ ಅವರನ್ನು ವಾಯುದೇವರ ಅವತಾರವೆಂದು ಪರಿಗಣಿಸಲಾಗುತ್ತದೆ. ಅವರು ವಿಜಯದಶಮಿಯಂದು ಜನಿಸಿರುವುದು ವಿಶೇಷವಾಗಿದೆ ಎಂದು ವಿವರಿಸಿದರು.
ಬಾಲ್ಯದಿಂದಲೇ ಆಧ್ಯಾತ್ಮಿಕ ಚಿಂತನೆಯತ್ತ ಒಲವು ಹೊಂದಿದ್ದ ಮಧ್ವಾಚಾರ್ಯರು ಎಂಟನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ದ್ವೈತ ವೇದಾಂತ ಸಿದ್ಧಾಂತವನ್ನು ಪ್ರತಿಪಾದಿಸಿ ಭಕ್ತಿಮಾರ್ಗಕ್ಕೆ ಹೊಸ ಆಯಾಮ ನೀಡಿದರು. ‘ಹರಿ ಸರ್ವೋತ್ತಮ’ ಎಂಬ ತತ್ವವನ್ನು ಸಾರುವ ಮೂಲಕ ಭಗವಂತನ ಮೇಲಿನ ಭಕ್ತಿ ಮತ್ತು ಧಾರ್ಮಿಕ ಜೀವನದ ಮಹತ್ವವನ್ನು ತಿಳಿಸಿಕೊಟ್ಟರು ಎಂದು ಹೇಳಿದರು.
ಉಡುಪಿಯಲ್ಲಿ ಶ್ರೀಕೃಷ್ಣನ ಆರಾಧನಾ ಪರಂಪರೆಯನ್ನು ಬೆಳೆಸಿದ ಮಧ್ವಾಚಾರ್ಯರು ಅಷ್ಟಮಠಗಳ ವ್ಯವಸ್ಥೆಯನ್ನು ಸ್ಥಾಪಿಸಿದರು. ವೇದಾಂತ, ಭಗವದ್ಗೀತೆ ಹಾಗೂ ಧಾರ್ಮಿಕ ತತ್ವಗಳ ಕುರಿತು 37 ಸರ್ವಮೂಲ ಗ್ರಂಥಗಳನ್ನು ರಚಿಸಿ ಭಾರತೀಯ ತತ್ವಶಾಸ್ತ್ರಕ್ಕೆ ಮಹತ್ವದ ಕೊಡುಗೆ ನೀಡಿದರು. ಅವರ ಬೋಧನೆಗಳು ಇಂದಿಗೂ ಭಕ್ತರಿಗೆ ಮತ್ತು ಆಧ್ಯಾತ್ಮಿಕ ಚಿಂತಕರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ, ಕಾರ್ಯದರ್ಶಿ ಬಿ. ಈರಣ್ಣ, ವಿಪ್ರ ಸಮಾಜದ ತಾಲೂಕು ಅಧ್ಯಕ್ಷ ಮುದ್ದುರಂಗರಾವ್ ಮುತಾಲಿಕ್, ಶ್ರೀಧರರಾವ್, ರಾಜು ಶೆಟ್ಟಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಇ. ಬಸವರಾಜ ಶೆಟ್ಟಿ, ಅರವಿಂದ ದೇಸಾಯಿ, ವಕೀಲ ಎ.ಎನ್. ರಾಜು, ಗೋಪಿ ಇಬ್ರಾಂಪುರ, ನರಸಿಂಹಾಚಾರ್ ಜಾನೇಕಲ್, ಭೀಮಸೇನರಾವ್, ರಾಘವೇಂದ್ರರಾವ್, ಸುನೀಲ್, ರಂಗರಾವ್, ರಾಘವೇಂದ್ರ ಶೆಟ್ಟಿ ದ್ಯಾಸನೂರು, ವೆಂಕಟೇಶಮೂರ್ತಿ, ಕೆ.ಎಲ್. ಸುಬ್ರಹ್ಮಣ್ಯಂ, ವೆಂಕಟೇಶ, ಆರ್. ಹನುಮೇಶ, ಶ್ರೀಕಾಂತ, ನವತಾ ರಾಘವೇಂದ್ರ, ಆರ್. ಪಾಂಡು ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



