ದೇವದುರ್ಗ, ಅ.21: ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ನಡೆಯುತ್ತಿದ್ದ ನವರಾತ್ರಿ ಮತ್ತು ನಾಡದಸರಾ ಮಹೋತ್ಸವವು ಬುಧವಾರ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು, ಪಲ್ಲಕ್ಕಿ ಮೆರವಣಿಗೆ ಹಾಗೂ ಬನ್ನಿ ಪೂಜೆಯೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಪ್ರತಿವರ್ಷದ ಸಂಪ್ರದಾಯದಂತೆ ಪಟ್ಟಣದ ಐತಿಹಾಸಿಕ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ದೇವರ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ದರ್ಬಾರ್ ಕೋಟೆ ರಸ್ತೆ, ಚೌಡಿಕಟ್ಟಿ, ಗಾಂಧಿ ಚೌಕ್, ಬಸವೇಶ್ವರ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡು ದಸರಾ ಸಂಭ್ರಮಕ್ಕೆ ಸಾಕ್ಷಿಯಾದರು. ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆದ ಮೆರವಣಿಗೆಯು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಿಸಿತು.

ಬಳಿಕ ಮೆರವಣಿಗೆ ಬನ್ನಿಮಂಟಪಕ್ಕೆ ತಲುಪಿದಾಗ ಪೊಲೀಸ್ ಠಾಣೆಯಿಂದ ತರಲಾಗಿದ್ದ ಪಟ್ಟದ ಕತ್ತಿ ಹಾಗೂ ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ನಂತರ ರಾಜಮನೆತನದ ವಂಶಸ್ಥರು, ಗಣ್ಯರು ಹಾಗೂ ಸಾರ್ವಜನಿಕರು ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡು ವಿಜಯದಶಮಿ ಶುಭಾಶಯಗಳನ್ನು ಕೋರಿದರು.

ಹಿರಿಯರ ಆಶೀರ್ವಾದ ಪಡೆದು, ಬಂಧುಮಿತ್ರರು ಹಾಗೂ ಆತ್ಮೀಯರಿಗೆ ಬನ್ನಿ ನೀಡುವ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯ ಸಂದೇಶ ಸಾರಲಾಯಿತು. ವಿಜಯದಶಮಿ ಹಬ್ಬದ ಅಂಗವಾಗಿ ಪಟ್ಟಣದ ಜನರು ಸಾಂಪ್ರದಾಯಿಕ ಆಚರಣೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಈ ಸಂದರ್ಭದಲ್ಲಿ ದೇವದುರ್ಗ ಸಂಸ್ಥಾನದ ರಾಜಮನೆತನದ ಯುವರಾಜ ರಾಜ ವೆಂಕಟೇಶ ನಾಯಕ, ದೊರೆ ತಿರುಮಲಾಚಾರ್ಯ, ಭೀಮಾಚಾರ್ಯ, ರಾಜ ಜೋಶಿ ಶೆಟ್ಟಿ, ಶಿವನಗೌಡ, ಶಿವನಗೌಡ ಕುಪ್ಪಿ ಮೇಟಿ, ಶೆಟ್ಟಿ ವೆಂಕನಗೌಡ, ಶೆಟ್ಟಿ ಸುಹಾಸ್, ವಿನಯಕುಮಾರ್, ಪೊಲೀಸ್ ಪಾಟೀಲ್ ಬಸವರಾಜ್, ಪಡಿಶೆಟ್ಟಿ, ಡಾ. ಬಸವರಾಜ್, ಗೋಪಾಲ್ ಸಮೇದ ಪೂಜಾರಿ, ಲಕ್ಷ್ಮಯ್ಯ, ಮಲ್ಲಯ್ಯ, ಡಾ. ಮಲ್ಲಯ್ಯ ನಾಯಕ, ಸುರೇಶ್ ಅಮರಾಪುರ, ಬೂದೆಪ್ಪ ಬಳೆ, ಚೆನ್ನಯ್ಯ ಸ್ವಾಮಿ, ಶಿವರಾಜ್ ಪೂಜಾರಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್. ಶಿವರಾಜ್ ಉಪಸ್ಥಿತರಿದ್ದರು.

ಇವರೊಂದಿಗೆ ಐತಿಹಾಸಿಕ ದೇವದುರ್ಗ ಸಂಸ್ಥಾನದ ವಂಶಸ್ಥರು, ವತನದಾರರು, ಮುಜರಾಯಿದಾರರು, ದೇಸಾಯಿಗಳು, ಪೊಲೀಸ್ ಪಾಟೀಲರು, ಪಟ್ಟಣದ ಗಣ್ಯರು, ಸುಮಂಗಲಿಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ನಾಡದಸರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.