ಮಾನ್ವಿ: ತಾಲೂಕಿನ ಹರನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀದೇವಿ ಪುರಾಣ ಮಹಾಮಂಗಲೋತ್ಸವವು ಧಾರ್ಮಿಕ ಕಾರ್ಯಕ್ರಮಗಳು, ದೇವಿಯ ಭಾವಚಿತ್ರ ಮೆರವಣಿಗೆ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಂಭ್ರಮದಿಂದ ನೆರವೇರಿತು.

ಮಹಾಮಂಗಲೋತ್ಸವದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಸುಮಂಗಲಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಕಳಸ ಕುಂಭಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು. ವಿವಿಧ ಕಲಾ ತಂಡಗಳೊಂದಿಗೆ ಸಾಗಿದ ಮೆರವಣಿಗೆಯು ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ರಾಯಚೂರಿನ ಸೋಮವಾರಪೇಟೆ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿ, ವಿಜಯದಶಮಿ ಹಬ್ಬವು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸಾರುವ ಪವಿತ್ರ ದಿನವಾಗಿದೆ. ಮನುಷ್ಯನ ಜೀವನದಲ್ಲಿ ಸನ್ಮಾರ್ಗ, ಸದ್ವಿಚಾರ ಹಾಗೂ ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.

ಶ್ರೀದೇವಿ ಪುರಾಣದ ಶ್ರವಣದಿಂದ ಮನಸ್ಸಿನಲ್ಲಿ ಉತ್ತಮ ಆಲೋಚನೆಗಳು ಮೂಡುತ್ತವೆ. ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಬದುಕಿನಲ್ಲಿ ಉನ್ನತಿ ಸಾಧಿಸಲು ಪ್ರೇರಣೆ ನೀಡುತ್ತವೆ. ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀದೇವಿ ಪುರಾಣ ಪ್ರವಚನ ನೀಡಿದರು. ಹಾಲಸಮುದ್ರದ ಅಯ್ಯಪ್ಪ ವಿ.ಎಂ. ಮರಳಿ ಅವರು ಸಂಗೀತ ಸೇವೆ ಸಲ್ಲಿಸಿದರೆ, ಚಿನ್ಮಳ್ಳಿಯ ಶಂಕ್ರಯ್ಯ ಹಿರೇಮಠ ತಬಲ ಸಾಥ್ ನೀಡಿದರು.

ಇದೇ ಸಂದರ್ಭದಲ್ಲಿ ಕಲಾವಿದರು ಭಕ್ತಿಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಭಕ್ತರ ಗಮನ ಸೆಳೆದರು. ಧಾರ್ಮಿಕ ಪ್ರವಚನ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಹಾಮಂಗಲೋತ್ಸವಕ್ಕೆ ವಿಶೇಷ ಮೆರುಗು ದೊರೆಯಿತು.

ಗ್ರಾಮದ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀದೇವಿಯ ದರ್ಶನ ಪಡೆದು ಭಕ್ತಿಭಾವದಿಂದ ಮಹಾಮಂಗಲೋತ್ಸವವನ್ನು ಆಚರಿಸಿದರು.