ದೇವದುರ್ಗ: ತಾಲೂಕಿನ ದೇವರಗುಡ್ಡ ಗ್ರಾಮದ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಹಾಗೂ ಚಿಕ್ಕಮಠದಲ್ಲಿ ವಿಜಯದಶಮಿ ಅಂಗವಾಗಿ ದಸರಾ ಮಹೋತ್ಸವವನ್ನು ಶ್ರೀಮಠದ ಪೀಠಾಧಿಪತಿ ಮಲ್ಲರಾಯ ತಾತನವರ ದಿವ್ಯ ಸಾನ್ನಿಧ್ಯದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಯಿತು.

ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 16ರಂದು ಶುಕ್ರವಾರ ಬೆಳಿಗ್ಗೆ ಶ್ರೀ ಮೈಲಾರಲಿಂಗೇಶ್ವರ ದೇವರಿಗೆ ಗಂಗಾಸ್ನಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಅಕ್ಟೋಬರ್ 19 ಮತ್ತು 20ರಂದು ಶ್ರೀಮಠದ ಪೂಜ್ಯರ ನೇತೃತ್ವದಲ್ಲಿ ಹಾಗೂ ಗ್ರಾಮದ ಮುಖಂಡರ ಸಹಕಾರದೊಂದಿಗೆ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮ ಜರುಗಿತು.

ವಿಜಯದಶಮಿ ಪ್ರಯುಕ್ತ ಗುರುವಾರ ಬೆಳಗಿನ ಜಾವ 5 ಗಂಟೆಗೆ ಗುಡ್ಡದ ಮೇಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಕೆಳಗಿನ ಮಠದವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಶ್ರೀ ಅಮಾತೇಶ್ವರ ದೇವಸ್ಥಾನದ ಬಳಿಯ ಬನ್ನಿ ಮಹಾಂಕಾಳಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಶ್ರೀ ಮೈಲಾರಲಿಂಗೇಶ್ವರ ದೇವರ ಮೂರ್ತಿಯ ಮೆರವಣಿಗೆ ನಡೆಯಿತು. ಡೊಳ್ಳು, ಮಂಗಳವಾದ್ಯ ಹಾಗೂ ಭಜಂತ್ರಿಗಳ ನಾದದೊಂದಿಗೆ ನಡೆದ ಮೆರವಣಿಗೆಯಲ್ಲಿ ಪೂರವಂತಿಕೆ ಸೇವೆ, ಶ್ರೀ ಮಲ್ಲಯ್ಯನ ಕುದುರೆ ಸವಾರಿ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಗಮನ ಸೆಳೆದವು. ಗ್ರಾಮದ ಸುಮಂಗಲಿಯರು ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು.

ಶ್ರೀಮಠದ ಪೀಠಾಧಿಪತಿ ಮಲ್ಲರಾಯ ತಾತನವರ ಸಾನ್ನಿಧ್ಯದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು. ಗ್ರಾಮದ ಹಿರಿಯರು, ಮುಖಂಡರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜ್ಯರಿಗೆ ಬನ್ನಿ ಪತ್ರಿ ಸಮರ್ಪಿಸಿ ಆಶೀರ್ವಾದ ಪಡೆದರು.

ನಂತರ ಶ್ರೀಮಠದ ಆವರಣದಲ್ಲಿ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ‘ಬನ್ನಿ ಬಂಗಾರವಾಗಲಿ’ ಎಂದು ಶುಭ ಹಾರೈಸಿದರು. ವಿಜಯದಶಮಿ ಹಬ್ಬವು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಸಂಪ್ರದಾಯವಾಗಿದ್ದು, ಭಕ್ತರು ಒಗ್ಗಟ್ಟಿನಿಂದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ದೇವರಗುಡ್ಡ ಗ್ರಾಮದ ಹಿರಿಯರು, ಮುಖಂಡರು, ಶ್ರೀಮಠದ ಭಕ್ತರು ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮೈಲಾರಲಿಂಗೇಶ್ವರ ದೇವರ ದರ್ಶನ ಪಡೆದು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡರು.