ಸಿಂಧನೂರು: ರಾಯಚೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 41ನೇ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಆರ್. ಗುರುನಾಥ್ ಕರೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 40 ವರ್ಷಗಳ ಬಳಿಕ ರಾಯಚೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿರುವುದು ಜಿಲ್ಲೆಯ ಪತ್ರಿಕಾ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮ್ಮೇಳನವನ್ನು ಮಾದರಿಯಾಗಿ ಸಂಘಟಿಸುವ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತರ ಮೇಲಿದೆ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಿಂದ ನಾಲ್ಕು ಸಾವಿರಕ್ಕೂ ಅಧಿಕ ಪತ್ರಕರ್ತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹೊರಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರಿಗೆ ಅಗತ್ಯ ವಸತಿ, ಊಟೋಪಚಾರ ಸೇರಿದಂತೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಸಮ್ಮೇಳನ ಸಮಿತಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮ್ಮೇಳನವು ಕೇವಲ ಔಪಚಾರಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಪತ್ರಕರ್ತರ ನಡುವೆ ಪರಸ್ಪರ ಒಗ್ಗಟ್ಟು ಬೆಳೆಸುವ ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಬೇಕು. ಎಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಹಿರಿಯ ಪತ್ರಕರ್ತ ಡಿ.ಎಚ್. ಕಂಬಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕುಕುನೂರು, ಖಜಾಂಚಿ ಮಲ್ಲಿಕಾರ್ಜುನ್ ಸ್ವಾಮಿ, ರಾಜ್ಯ ಸಮಿತಿ ಮಾಜಿ ಸದಸ್ಯ ಶಿವಮೂರ್ತಿ ಸ್ವಾಮಿ ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಅಶೋಕ ಬೆನ್ನೂರು, ಜಿಲ್ಲಾ ಸಮಿತಿ ಸದಸ್ಯರಾದ ಲಕ್ಷ್ಮಣ ಕಪಗಲ್, ಚಂದ್ರಶೇಖರ ಯರದಿಹಾಳ, ಪ್ರಸನ್ ಜೈನ್, ಮೊಹಮ್ಮದ್ ಮುಸ್ತಫಾ, ತಾಲೂಕು ಅಧ್ಯಕ್ಷ ಶರಣಪ್ಪ ಬೇರಿಗೆ, ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು, ಸದಸ್ಯರಾದ ಗುರುಗೌಡ ಸೇರಿದಂತೆ ಸಿಂಧನೂರಿನ ಪತ್ರಕರ್ತರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.