ಜಾಲಹಳ್ಳಿ, ಅ.23: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಶಿಕ್ಷಕ ಮತದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಬಾರಿ ಅವರು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎ. ರಾಜಶೇಖರ ನಾಯಕ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಶರಣಪ್ಪ ಮಟ್ಟೂರು ಅವರ ಪರವಾಗಿ ಮತದಾರರು ಒಲವು ತೋರಿದ್ದಾರೆ. ಕ್ಷೇತ್ರದಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಗೆಲುವಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಶುಕ್ರವಾರ ನಡೆದ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಮತಗಟ್ಟೆಯಲ್ಲಿ ಶೇ.92.31ರಷ್ಟು ಮತದಾನ ದಾಖಲಾಗಿದೆ. ಒಟ್ಟು 39 ಮತದಾರರಲ್ಲಿ 36 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಅರವಿಂದ ಮಾಹಿತಿ ನೀಡಿದರು.

ಮತದಾನ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಪಿಎಸ್‌ಐ ವೈಶಾಲಿ ಝಳಕಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಬಸವರಾಜ ಪಂಪಾಪತಿ, ಕೆಪಿಸಿಸಿ ಸಂಯೋಜಕ ವೇಣುಗೋಪಾಲಗೌಡ, ತಿಮ್ಮಣ್ಣ ನಾಯಕ ದಿವಾನ, ಸುದರ್ಶನ್ ಭವಾನಿ, ಅಯ್ಯನಗೌಡ ಗಲಗ, ವೀರೇಶ್ ಹೇಮನೂರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲ್ಲನಗೌಡ ಗುಂಡಗುರ್ತಿ, ಅಜಿತ್ ಸಾಬ್ ದೇವದುರ್ಗ, ಬಾಪುಗೌಡ, ಅಯ್ಯಪ್ಪ ಸ್ವಾಮಿ, ಭೀಮಣ್ಣ ವೀರಘೋಟ, ಕಾಂಗ್ರೆಸ್ ಜಿಲ್ಲಾ ಪರಿಶಿಷ್ಟ ಜಾತಿ ಉಪಾಧ್ಯಕ್ಷ ಅಮರೇಗೌಡ ಕಮಲದಿನ್ನಿ, ಸಾಬಣ್ಣ ಪೂಜಾರಿ, ಭೂತಪ್ಪ ದೇವರಮನೆ, ದುರುಗಪ್ಪ ರಾಂಪಳ್ಳಿ, ಚನ್ನಬಸವ ನಾಯಕ ಮ್ಯಾಕಲದೊಡ್ಡಿ, ರಮೇಶ್ ಬಾಗೂರು, ಮಾನಪ್ಪ ಕಾವಲಿ, ಬಸವರಾಜ ಮಂಡಲಗುಡ್ಡ, ರಂಗನಾಥ ಕುದುರಿ, ಗುಡದಪ್ಪ ಮಂಡಲಗುಡ್ಡ, ಗೋಪಾಲ್ ನಾಯಕ, ಹನುಮಂತ ಬಡಿಗೇರ್, ದುರ್ಗಪ್ಪ ಬಡಿಗೇರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.