ದೇವದುರ್ಗ, ಅ.24: ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಹಾಗೂ ಕರ್ನಾಟಕ ರಾಜ್ಯ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು) ನೇತೃತ್ವದಲ್ಲಿ ದೇವದುರ್ಗದಿಂದ ರಾಯಚೂರಿನತ್ತ ಪಾದಯಾತ್ರೆ ಆರಂಭಿಸಲಾಯಿತು.

ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪ್ರಗತಿಪರ ಚಿಂತಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನರ್ಸಿಂಗ್ ರಾವ್ ಸರ್ಕಿಲ್, ಪ್ರಧಾನ ಕಾರ್ಯದರ್ಶಿ ನಾಗರಾಜ ತೇಲ್ಕರ್ ಮತ್ತು ಸಿಐಟಿಯು ಮುಖಂಡ ಶಬ್ಬೀರ್ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಅ.24ರಂದು ಆರಂಭಗೊಂಡಿರುವ ಪಾದಯಾತ್ರೆಗಳು ಅ.27ರಂದು ರಾಯಚೂರು ತಲುಪಲಿದ್ದು, ಅಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಧರಣಿ ಸತ್ಯಾಗ್ರಹ ನಡೆಸಲು ಸಂಘಟನೆಗಳು ನಿರ್ಧರಿಸಿವೆ.

ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ಒದಗಿಸಿ, ಬಾಕಿ ಉಳಿದಿರುವ ಕೂಲಿ ಹಣವನ್ನು ತಕ್ಷಣ ಪಾವತಿಸಬೇಕು. ಅರ್ಹ ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಿ, ಪ್ರತಿ ಕುಟುಂಬಕ್ಕೆ 50 ಕೆ.ಜಿ. ದವಸಧಾನ್ಯ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಅಲ್ಲದೆ, ಸ್ಥಗಿತಗೊಂಡಿರುವ ಪಿಂಚಣಿ ಬಿಡುಗಡೆ ಮಾಡಬೇಕು. ಭೂರಹಿತ ಕೃಷಿ ಕೂಲಿಕಾರರಿಗೆ ಸಾಗುವಳಿ ಭೂಮಿ ಹಕ್ಕುಪತ್ರ, ವಸತಿ ರಹಿತರಿಗೆ ಮನೆ ಹಾಗೂ ನಿವೇಶನ ಕಲ್ಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ಜೋಳ ಖರೀದಿ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಲಾಗಿದೆ.

ರೈತರಿಗೆ ಬಾಕಿ ಇರುವ ಬೆಳೆ ವಿಮೆ ಪರಿಹಾರ ಪಾವತಿಸುವುದು, ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ದಲಿತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸುವುದು ಮತ್ತು ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘಟನೆಗಳು ಮುಂದಿಟ್ಟಿವೆ.

ಪಾದಯಾತ್ರೆಯಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ಮುಖಂಡರಾದ ಹನುಮಂತ ಮಂಡಲಗುಡ್ಡ, ಹನುಮಂತ ಮಡಿವಾಳ, ರಂಗನಾಥ ಬುಂಕಲದೊಡ್ಡಿ, ಸುರೇಶಗೌಡ, ತಮ್ಮಣ್ಣ, ನರಸಪ್ಪ, ಬಸವರಾಜ ಲಿಂಗದಹಳ್ಳಿ, ಅಬ್ರಾಂ, ಬಸವರಾಜ ವಂದ್ಲಿ, ಶಿವಪ್ಪ ಚಿಂಚರಕಿ, ಮುಕ್ಕನಗೌಡ ಪಾಲ್ಗೊಂಡಿದ್ದರು.

ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಮುಖಂಡರಾದ ರಾಜು ನಾಯಕ, ಮಾಹಲಿಂಗ ದೊಡ್ಡಮನಿ, ವೆಂಕಟೇಶ ತ್ಯಾಪ್ಲಿ, ಮಲ್ಲಯ್ಯ ಗೌಡೂರು, ಕೊಂಡಯ್ಯ, ಸಂತೋಷ ತ್ಯಾಪ್ಲಿ, ದಿಲ್‌ಶಾದ್, ನಿಂಗಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಅ.27ರಂದು ರಾಯಚೂರಿನಲ್ಲಿ ನಡೆಯಲಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಘಟನೆಗಳ ಮುಖಂಡರು ಕರೆ ನೀಡಿದರು.