ಸಿಂಧನೂರು: ಕೇವಲ ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಪರೂಪದ ವೈದ್ಯಕೀಯ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗದಗ ಜಿಲ್ಲೆಯಿಂದ ಸಿಂಧನೂರಿನ ಸಹನಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದ ಹಸುಗೂಸಿನಲ್ಲಿ ಈ ಅಸಹಜ ಬೆಳವಣಿಗೆ ಕಂಡುಬಂದಿದ್ದು, ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಗದಗ ಜಿಲ್ಲೆಯ ದಂಪತಿ ತಮ್ಮ ಎರಡು ತಿಂಗಳ ಗಂಡು ಮಗುವಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಂಧನೂರಿನ ಸಹನಾ ಆಸ್ಪತ್ರೆಗೆ ಕರೆತಂದಿದ್ದರು. ಮಗುವನ್ನು ಪರೀಕ್ಷಿಸಿದ ವೈದ್ಯ ಡಾ.ಶಿವರಾಜ ಪಾಟೀಲ್ ಅವರಿಗೆ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಇರುವ ಅಪರೂಪದ ಸ್ಥಿತಿ ಕಂಡುಬಂದಿದೆ. ಮಗುವಿನ ಆರೋಗ್ಯದ ಸೂಕ್ಷ್ಮತೆಯನ್ನು ಗಮನಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ವೈದ್ಯಕೀಯ ಸೌಲಭ್ಯವಿರುವ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು 'ಫೀಟಸ್ ಇನ್ ಫೀಟು' (Fetus in Fetu) ಎಂದು ಕರೆಯಲಾಗುತ್ತದೆ. ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಅವಳಿ ಭ್ರೂಣಗಳ ಬೆಳವಣಿಗೆಯಲ್ಲಿನ ಅಸಹಜತೆಯಿಂದ ಒಂದು ಭ್ರೂಣ ಮತ್ತೊಂದು ಭ್ರೂಣದ ದೇಹದೊಳಗೆ ಬೆಳವಣಿಗೆಯಾಗುವ ಅತ್ಯಂತ ಅಪರೂಪದ ಸ್ಥಿತಿ ಇದಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ವೈದ್ಯಕೀಯ ಕ್ಷೇತ್ರದಲ್ಲಿ ವಿರಳವಾಗಿ ಕಂಡುಬರುತ್ತವೆ.
ಸುಮಾರು 50 ಲಕ್ಷ ಮಕ್ಕಳಲ್ಲಿ ಒಂದು ಅಥವಾ ಎರಡು ಪ್ರಕರಣಗಳು ಮಾತ್ರ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿರುವ ಈ ಸ್ಥಿತಿ, ವೈದ್ಯರಿಗೂ ಚಿಕಿತ್ಸೆಯ ದೃಷ್ಟಿಯಿಂದ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಎರಡು ತಿಂಗಳ ಹಸುಗೂಸಿನಲ್ಲಿ ಇಂತಹ ಅಸಹಜ ಬೆಳವಣಿಗೆ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮಗುವಿನ ದೇಹದೊಳಗೆ ಕಂಡುಬಂದಿರುವ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕಾಗಿದ್ದು, ಮಗುವಿನ ವಯಸ್ಸು ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಅತ್ಯಂತ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಾಗಿದೆ. ಬೆಂಗಳೂರಿನ ತಜ್ಞ ವೈದ್ಯರು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದು, ಅದರ ನಂತರವೇ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಸಹನಾ ಆಸ್ಪತ್ರೆಯ ವೈದ್ಯ ಡಾ.ಶಿವರಾಜ ಪಾಟೀಲ್, ರಾಜ್ಯದಲ್ಲಿ ಇದುವರೆಗೆ ವರದಿಯಾಗಿರುವ ಇಂತಹ ಪ್ರಕರಣಗಳಲ್ಲಿ ಇದು ಮೂರನೆಯದು ಎಂದು ತಿಳಿಸಿದ್ದಾರೆ. ಮಗುವಿನ ಆರೋಗ್ಯದಲ್ಲಿ ಹಲವು ಸಮಸ್ಯೆಗಳಿರುವುದರಿಂದ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿರುವ ಹಸುಗೂಸಿನ ಆರೋಗ್ಯ ಸ್ಥಿತಿಯ ಬಗ್ಗೆ ಪಾಲಕರಲ್ಲಿ ಆತಂಕ ಮನೆಮಾಡಿದ್ದು, ಶಸ್ತ್ರಚಿಕಿತ್ಸೆಯ ಫಲಿತಾಂಶದ ಮೇಲೆ ಎಲ್ಲರ ಗಮನ ನೆಟ್ಟಿದೆ. ಅಪರೂಪದ ವೈದ್ಯಕೀಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿರುವ ಸಿಂಧನೂರಿನ ವೈದ್ಯರ ಕಾರ್ಯ ಗಮನ ಸೆಳೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಹನಾ ಆಸ್ಪತ್ರೆಯ ಡಾ.ಶಿವರಾಜ ಪಾಟೀಲ್, 'ಇಂತಹ ಪ್ರಕರಣಗಳು ವೈದ್ಯರ ವೃತ್ತಿಜೀವನದಲ್ಲಿಯೇ ಅತ್ಯಂತ ವಿರಳವಾಗಿ ಎದುರಾಗುತ್ತವೆ. ಎರಡು ತಿಂಗಳ ಮಗುವನ್ನು ಪಾಲಕರು ನಮ್ಮ ಆಸ್ಪತ್ರೆಗೆ ಕರೆತಂದಾಗ ಪರೀಕ್ಷೆಯಲ್ಲಿ ಹೊಟ್ಟೆಯೊಳಗೆ ಭ್ರೂಣ ಇರುವುದು ಕಂಡುಬಂದಿದೆ. ಮಗುವಿನ ಆರೋಗ್ಯದಲ್ಲಿ ಹಲವು ಸಮಸ್ಯೆಗಳಿರುವುದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಉನ್ನತ ಆಸ್ಪತ್ರೆಗೆ ರವಾನಿಸಿದ್ದೇವೆ. ನಮ್ಮ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇದು ಮೂರನೇ ಪ್ರಕರಣವಾಗಿದೆ. ಇಂದು ಅಥವಾ ನಾಳೆ ಶಸ್ತ್ರಚಿಕಿತ್ಸೆ ನಡೆಯುವ ಸಾಧ್ಯತೆಯಿದ್ದು, ನಂತರ ಮಗುವಿನ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ' ಎಂದು ತಿಳಿಸಿದ್ದಾರೆ.



