ಸಿಂಧನೂರು: ಹಲವು ವರ್ಷಗಳಿಂದ ಭೂತಲದಿನ್ನಿ ಗ್ರಾಮದಲ್ಲಿ ಆಶ್ರಯ ಪಡೆದಿದ್ದ ಅನಾಥ ವೃದ್ಧೆ ಸುಶೀಲಮ್ಮ (ಜೋಗಮ್ಮ) (73) ಅವರ ನಿಧನದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸುಶೀಲಮ್ಮ ಅವರು ಹಲವು ವರ್ಷಗಳಿಂದ ಭೂತಲದಿನ್ನಿ ಗ್ರಾಮದಲ್ಲಿ ವಾಸವಾಗಿದ್ದು, ಗ್ರಾಮದ ಜನರು ಅವರನ್ನು ತಮ್ಮ ಕುಟುಂಬದ ಸದಸ್ಯೆಯಂತೆ ನೋಡಿಕೊಳ್ಳುತ್ತಿದ್ದರು. ಊರಿನ ಹಿರಿಯರು, ಮಹಿಳೆಯರು ಹಾಗೂ ಯುವಕರು ಅವರಿಗೆ ಅಗತ್ಯ ಸಹಾಯ, ಸಹಕಾರ ನೀಡುತ್ತಿದ್ದರು. ಕೆಲ ತಿಂಗಳ ಹಿಂದೆ ಗ್ರಾಮಸ್ಥರ ಸಹಕಾರದೊಂದಿಗೆ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ವತಿಯಿಂದ ನಡೆಸಲಾಗುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿತ್ತು.
ಆದರೆ, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯದಿಂದ ಸುಶೀಲಮ್ಮ ಅವರು ಆಶ್ರಮದಲ್ಲಿಯೇ ನಿಧನರಾದರು. ಈ ವಿಷಯ ತಿಳಿದ ಭೂತಲದಿನ್ನಿ ಗ್ರಾಮಸ್ಥರು ಆಶ್ರಮಕ್ಕೆ ಆಗಮಿಸಿ, ಅಗತ್ಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸವಸ್ವಾಮಿ ಹಿರೇಮಠ, ಸುಶೀಲಮ್ಮ ಅವರು ಕಾರುಣ್ಯ ಕುಟುಂಬದ ಸದಸ್ಯೆಯಾಗಿ ನಮ್ಮೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಭೂತಲದಿನ್ನಿ ಗ್ರಾಮಸ್ಥರು ಅವರನ್ನು ಸ್ವಂತ ತಾಯಿಯಂತೆ ಪ್ರೀತಿ, ಕಾಳಜಿಯಿಂದ ನೋಡಿಕೊಂಡಿದ್ದಾರೆ. ಅವರ ಸೇವಾ ಮನೋಭಾವ ಹಾಗೂ ಮಾನವೀಯ ಗುಣಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.
ಸುಶೀಲಮ್ಮ ಅವರ ಅಂತ್ಯಸಂಸ್ಕಾರದಲ್ಲಿ ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಂಬನಿ ಮಿಡಿದಿರುವುದು ಅವರ ಮೇಲಿದ್ದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಗ್ರಾಮಸ್ಥರ ಹೃದಯದಲ್ಲಿ ಸುಶೀಲಮ್ಮ ಅವರು ವಿಶೇಷ ಸ್ಥಾನ ಪಡೆದಿದ್ದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಎಲ್ಲರಿಗೂ ನೀಡಲಿ ಎಂದು ಪ್ರಾರ್ಥಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೂತಲದಿನ್ನಿ ಗ್ರಾಮಸ್ಥರಾದ ಜಗನ್ನಾಥ ರೆಡ್ಡಿ, ಅಮರೇಗೌಡ, ಬಸವರಾಜ ಅಂಗಡಿ, ಶರಣಪ್ಪ, ಮುತ್ತನಗೌಡ, ಬಸಯ್ಯಸ್ವಾಮಿ, ರಹಿಮಾನ್ ಸಾಬ್, ಬಂದೇ ನವಾಜ್, ಖಾಜಾ ಹುಸೇನ್, ನಾಗರಾಜಸ್ವಾಮಿ, ಶೈಲಜಾ ಪಾಟೀಲ್, ನಾಗರಾಜ, ಕಾಳಿಂಗ ರೆಡ್ಡಿ, ಅಂಬಮ್ಮ, ರತ್ನಮ್ಮ, ಕಾಶಮ್ಮ, ಈರಮ್ಮ, ಯಂಕಮ್ಮ, ಮಹೇಶ್ವರಿ, ಅಮೃತ, ಪಾರ್ವತಮ್ಮ, ಮಹಾಂತಮ್ಮ, ಲಕ್ಷ್ಮಿ, ದೇವಮ್ಮ, ಗುಂಡಪ್ಪ, ಶರಣಯ್ಯಸ್ವಾಮಿ ಹಾಗೂ ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸವಸ್ವಾಮಿ ಹಿರೇಮಠ, ಸದಸ್ಯೆ ಸುಜಾತ ಹಿರೇಮಠ, ಸಿಬ್ಬಂದಿಗಳಾದ ಸಿದ್ದಯ್ಯಸ್ವಾಮಿ, ಮರಿಯಪ್ಪ, ವಿದ್ಯಾಶ್ರೀ, ಶಂಕ್ರಮ್ಮ, ಶರಣುಸ್ವಾಮಿ, ಬಸವಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



