ಸಿಂಧನೂರು: ತಾಲೂಕಿನ ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಯಚೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರು, ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಿಂಧನೂರಿನ ಸನ್‌ರೈಸ್ ಪ್ಯಾರಾಮೆಡಿಕಲ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೋಲಿಯೊ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಅರವಳಿಕೆ ತಜ್ಞೆ ಡಾ. ಕೋನಿಕಾ, ಪ್ರತಿ ವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತದೆ. ಪೋಲಿಯೊ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪೋಲಿಯೊ ಮುಕ್ತ ಜಗತ್ತನ್ನು ನಿರ್ಮಿಸುವ ಸಂಕಲ್ಪವನ್ನು ಬಲಪಡಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಪೋಲಿಯೊ ವಿರುದ್ಧ ಮೊದಲ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಡಾ. ಜೋನಾಸ್ ಸಾಲ್ಕ್ ಅವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆಯು ವಿಶ್ವ ಪೋಲಿಯೊ ದಿನಾಚರಣೆಯನ್ನು ಆರಂಭಿಸಿತು. ಪೋಲಿಯೊ ವೈರಸ್‌ನಿಂದ ಹರಡುವ ಈ ಸಾಂಕ್ರಾಮಿಕ ಕಾಯಿಲೆಯು ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳನ್ನು ಬಾಧಿಸುತ್ತದೆ. ನರಮಂಡಲದ ಮೇಲೆ ಪರಿಣಾಮ ಬೀರುವ ಈ ರೋಗವು ಶಾಶ್ವತ ಅಂಗವೈಕಲ್ಯ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಲಸಿಕೆ ಮೂಲಕ ರೋಗವನ್ನು ತಡೆಗಟ್ಟುವುದು ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಿದರು.

ನಂತರ ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ. ವಿರೂಪಾಕ್ಷಪ್ಪ ಟಿ. ಮಾತನಾಡಿ, ಒಂದು ಕಾಲದಲ್ಲಿ ಭಾರತದಲ್ಲಿ ಪೋಲಿಯೊ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವು. ಕೇಂದ್ರ ಸರ್ಕಾರದ ಪಲ್ಸ್ ಪೋಲಿಯೊ ಅಭಿಯಾನ, ಆರೋಗ್ಯ ಇಲಾಖೆಯ ನಿರಂತರ ಪ್ರಯತ್ನ ಹಾಗೂ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದ ದೇಶದಲ್ಲಿ ಪೋಲಿಯೊ ನಿಯಂತ್ರಣಕ್ಕೆ ಬಂದಿದೆ. 2011ರ ಜನವರಿ ನಂತರ ಭಾರತದಲ್ಲಿ ಸ್ಥಳೀಯವಾಗಿ ಹರಡಿದ ಯಾವುದೇ ಹೊಸ ವೈಲ್ಡ್ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ಇದರ ಪರಿಣಾಮವಾಗಿ 2014ರ ಮಾರ್ಚ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸೇರಿದಂತೆ ಆಗ್ನೇಯ ಏಷ್ಯಾ ವಲಯವನ್ನು ಪೋಲಿಯೊ ಮುಕ್ತವೆಂದು ಘೋಷಿಸಿತು ಎಂದು ತಿಳಿಸಿದರು.

ವಿಶ್ವದಿಂದ ಪೋಲಿಯೊ ಸಂಪೂರ್ಣ ನಿರ್ಮೂಲನೆಯಾಗುವವರೆಗೆ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ನಿಗದಿತ ಸಮಯದಲ್ಲಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ರೋಗ ಹರಡುವುದನ್ನು ತಡೆಯಲು ಪೋಷಕರು ಮತ್ತು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಎಚ್‌ಇಒ, ಸಿರಿಲ ಲಾರ್ಜರ್ ಕಾಲೇಜಿನ ಪ್ರಾಂಶುಪಾಲರು, ಪ್ರಾಥಮಿಕ ಆರೋಗ್ಯ ಸಮುದಾಯ ಅಧಿಕಾರಿಗಳಾದ ಭಾಗ್ಯ, ದುರ್ಗಾ, ಶರಣಮ್ಮ, ಆಶಾ ಕಾರ್ಯಕರ್ತೆಯರು, ಸನ್‌ರೈಸ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.