ಜಾಲಹಳ್ಳಿ: ಪಟ್ಟಣದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮೈದಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿಸಿರುವ ಎಚ್‌ಪಿಎಲ್ (ಹೊರಟ್ಟಿ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿಗೆ ಅಡ್ಡಿಪಡಿಸದೆ, ಕ್ರೀಡಾಕೂಟ ಮುಂದುವರಿಸಲು ಅವಕಾಶ ಕಲ್ಪಿಸಬೇಕೆಂದು ಸ್ಥಳೀಯ ಯುವಕರು ಹಾಗೂ ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಹಲವು ವರ್ಷಗಳಿಂದ ಹೊರಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವುದು, ದೈಹಿಕ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಪರಸ್ಪರ ಸ್ನೇಹಭಾವ ಮೂಡಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಆದರೆ, ಈ ಬಾರಿ ಕೆಲವರು ಅನಗತ್ಯವಾಗಿ ಪಂದ್ಯಾವಳಿ ನಡೆಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಇಸಿಒ ನರೇಶ್ ಅವರಿಗೆ ಸ್ಥಳೀಯರು ಹಾಗೂ ಕ್ರೀಡಾಪಟುಗಳು ಮನವಿ ಸಲ್ಲಿಸಿ, ಪಂದ್ಯಾವಳಿ ನಡೆಸಲು ಅವಕಾಶ ನೀಡುವಂತೆ ಕೋರಿದರು.

ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಪ್ರತಿದಿನ ಬೆಳಿಗ್ಗೆ ಶಾಲೆ ಆರಂಭವಾಗುವ ಮೊದಲೇ ಕ್ರಿಕೆಟ್ ಪಂದ್ಯಗಳನ್ನು ಪೂರ್ಣಗೊಳಿಸಲಾಗುವುದು. ವಿದ್ಯಾರ್ಥಿಗಳ ಪಾಠಪ್ರವಚನ, ಶಾಲೆಯ ಶಿಸ್ತು ಹಾಗೂ ದೈನಂದಿನ ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಪಂದ್ಯಾವಳಿ ನಡೆಸುವುದಾಗಿ ಕ್ರೀಡಾಪಟುಗಳು ಭರವಸೆ ನೀಡಿದರು.

ಯುವಕರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಇಂತಹ ಪಂದ್ಯಾವಳಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸಹಕಾರ ನೀಡಬೇಕು. ಅನಗತ್ಯ ಅಡ್ಡಿಗಳಿಗೆ ಅವಕಾಶ ನೀಡದೆ ಪಂದ್ಯಾವಳಿ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದುರುಗಪ್ಪ ಹೊರಟ್ಟಿ, ಬಸವರಾಜ ನಾಯಕ ಲಿಂಗದಹಳ್ಳಿ, ಮೌನೇಶ ದಾಸರ, ಅನುಮಂತ ಮಡಿವಾಳ, ಅಮ್ಮಣ್ಣ, ರಂಗನಾಥ ವಂದಲಿ ಸೇರಿದಂತೆ ಸ್ಥಳೀಯ ಯುವಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.