ಹಟ್ಟಿ ಚಿನ್ನದ ಗಣಿ: ಮಹಿಳೆಯರು ತಮ್ಮ ಹಕ್ಕುಗಳು ಹಾಗೂ ಕಾನೂನು ಸೌಲಭ್ಯಗಳ ಬಗ್ಗೆ ಅರಿವು ಹೊಂದುವ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬೇಕು ಎಂದು ನ್ಯಾಯಾಧೀಶೆ ಹುಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ಶ್ರೀ ಲಿಂಗಾವಧೂತ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮಹಿಳೆಯರ ಸುರಕ್ಷತೆ, ಸಮಾನತೆ ಹಾಗೂ ನ್ಯಾಯಕ್ಕಾಗಿ ಹಲವು ಕಾನೂನು ಸೌಲಭ್ಯಗಳು ಲಭ್ಯವಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅಗತ್ಯ ಸಂದರ್ಭಗಳಲ್ಲಿ ಕಾನೂನು ನೆರವು ಪಡೆಯಲು ಹಿಂದೇಟು ಹಾಕಬಾರದು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ನ್ಯಾಯಾಧೀಶೆ ಹುಂಡಿ ಮಂಜುಳಾ ಶಿವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ., ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ, ಬಲಭೀಮರಾವ್ ಕುಲಕರ್ಣಿ ಹಾಗೂ ಯೋಜನಾಧಿಕಾರಿ ಅಡಿವಯ್ಯ ಅವರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಾಪನೆ, ಧ್ಯೇಯೋದ್ದೇಶಗಳು ಹಾಗೂ ಗ್ರಾಮೀಣ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಮಹಿಳೆಯರನ್ನು ಸಂಘಟಿಸಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹಿಸುವಲ್ಲಿ ಸ್ವಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಜ್ಞಾನವಿಕಾಸ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಶಿಕ್ಷಣ, ಆರೋಗ್ಯ, ಆರ್ಥಿಕ ನಿರ್ವಹಣೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಪೆಂಚಲಮ್ಮ ಮಾತನಾಡಿ, ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಜವಾಬ್ದಾರಿ, ಮಕ್ಕಳ ಪಾಲನೆ, ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಹಾಗೂ ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವ ಮಹತ್ವದ ಕುರಿತು ಉದಾಹರಣೆಗಳೊಂದಿಗೆ ಮಾಹಿತಿ ನೀಡಿದರು.
ಪೊಲೀಸ್ ಇನ್ಸ್ಪೆಕ್ಟರ್ ಹನುಮಂತನಾಯಕ್ ಮಾತನಾಡಿ, ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು, ಅವುಗಳನ್ನು ತಡೆಗಟ್ಟಲು ಇರುವ ಕಾನೂನು ಕ್ರಮಗಳು ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯಿಂದ ಪಡೆಯಬಹುದಾದ ನೆರವಿನ ಕುರಿತು ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಗೆ ವೀಲ್ಚೇರ್ ವಿತರಿಸಲಾಯಿತು. ಸುಜ್ಞಾನ ಶಿಷ್ಯವೇತನ ಯೋಜನೆಯಡಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ಹಾಗೂ ಆರೋಗ್ಯ ರಕ್ಷಾ ಯೋಜನೆಯ ಚೆಕ್ಗಳನ್ನು ವಿತರಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರೂ ಹೆಚ್ಚಿನ ಪ್ರಚಾರಕ್ಕೆ ಬಾರದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸೇವೆ ಮತ್ತು ಸಾಧನೆಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಡಕಲ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯೆಯಾಗಿ ತಾವು ಪಡೆದ ಅನುಭವಗಳನ್ನು ಹಂಚಿಕೊಂಡರು. ಯೋಜನೆಯಿಂದ ಮಹಿಳೆಯರಿಗೆ ದೊರೆಯುತ್ತಿರುವ ಪ್ರೋತ್ಸಾಹ ಹಾಗೂ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೃತ್ಯ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



