ಮಾನ್ವಿ: ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಬಡವರು ಹಾಗೂ ಸಾಮಾನ್ಯ ಜನರಿಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹೇಳಿದರು.

ತಾಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಾರದಾ ಆಸ್ಪತ್ರೆ ಪೋತ್ನಾಳ ಹಾಗೂ ಸಿಂಧನೂರಿನ ಶ್ರೀ ಗವಿಸಿದ್ದೇಶ್ವರ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರ ಸೇವೆ ಲಭ್ಯವಾಗುವಂತೆ ಸರ್ಕಾರದ ವತಿಯಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಶಿಬಿರಗಳಲ್ಲಿ ರೋಗಿಗಳಿಗೆ ಪ್ರಾಥಮಿಕ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರ ಜೊತೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರನ್ನು ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಿ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪೋತ್ನಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯನ್ನು ₹15 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಲು ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಇದರಿಂದ ಪೋತ್ನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಲಭ್ಯವಾಗಲಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ವೈದ್ಯರು ಸೇವೆ ಸಲ್ಲಿಸಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಪೋತ್ನಾಳದ ಡಾ. ಗುರುಶರ್ಮಾ ಹಾಗೂ ಸಿಂಧನೂರಿನ ಡಾ. ಶರಣಬಸವ ದೇವರೆಡ್ಡಿ ಅವರು ಬೆಂಗಳೂರಿನ ತಜ್ಞ ವೈದ್ಯರ ತಂಡದ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ತಮ್ಮ ಬಿಡುವಿನ ಸಮಯವನ್ನು ಜನರ ಆರೋಗ್ಯ ಸೇವೆಗೆ ಮೀಸಲಿಡುತ್ತಿರುವ ವೈದ್ಯರ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದರು.

ರಕ್ತದಾನವು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ವದ ಕಾರ್ಯವಾಗಿದ್ದು, ಯುವಜನರು ಸ್ವಯಂಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು. ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಯಾವುದೇ ಜೀವಹಾನಿಯಾಗದಂತೆ ರಕ್ತನಿಧಿಗಳಲ್ಲಿ ಅಗತ್ಯ ಪ್ರಮಾಣದ ರಕ್ತ ಸಂಗ್ರಹವಾಗಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕರೆ ನೀಡಿದರು.

ಶಾಸಕ ಹಂಪಯ್ಯ ನಾಯಕ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳ ಆಯೋಜನೆಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

ಅಡವಿ ಅಮರೇಶ್ವರ ಸುವರ್ಣಗಿರಿ ಮಠದ ತೋಟಾಂದರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆರೋಗ್ಯ ಶಿಬಿರದಲ್ಲಿ ಪೋತ್ನಾಳದ ಶಾರದಾ ಆಸ್ಪತ್ರೆಯ ಡಾ. ಗುರುಶರ್ಮಾ, ಸಿಂಧನೂರಿನ ಶ್ರೀ ಗವಿಸಿದ್ದೇಶ್ವರ ಆಸ್ಪತ್ರೆಯ ಡಾ. ಶರಣಬಸವ ದೇವರೆಡ್ಡಿ, ಡಾ. ನಾಗಭೂಷಣ, ಡಾ. ಅಶೋಕರಡ್ಡಿ, ಕ್ಯಾನ್ಸರ್ ತಜ್ಞೆ ಡಾ. ಬಿಂದು ಬ್ರೈಟ್, ಡಾ. ಶ್ರೀಕಾಂತ ವಲಸಪಲ್ಲಿ, ಡಾ. ಶೃತಿ, ಡಾ. ಅನಿಲ್ ಕುಮಾರ್, ಡಾ. ಚಂದ್ರಶೇಖರ್ ಎಂ. ಸಾಗರ್, ಡಾ. ನವೀನ್, ಡಾ. ರಾಜಶೇಖರ ಧರ್ಮಾಯತ್, ಡಾ. ಶರಣಬಸವ ಕುಲಕರ್ಣಿ, ಡಾ. ಪೂಜಾ ಪಾಟೀಲ್, ನೇತ್ರಾಧಿಕಾರಿ ವೆಂಕಟೇಶ, ಡಾ. ವೀರೇಶ ಹಾಗೂ ಡಾ. ಬಸವರಾಜಪ್ಪ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ನೂರಾರು ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ಮತ್ತು ಸಲಹೆ ನೀಡಿದರು.

ಶಿಬಿರದಲ್ಲಿ ರೋಗಿಗಳಿಗೆ ಉಚಿತ ಇಸಿಜಿ ಹಾಗೂ ಎಕೋ ಪರೀಕ್ಷೆಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ದೊಡ್ಡಬಸಪ್ಪಗೌಡ ಭೋಗವತಿ, ಸೈಯದ್ ಖಾಲಿದ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ, ಮಲ್ಲಿಕಾರ್ಜುನ ಪಾಟೀಲ್ ಮೂಲಿಮನಿ, ಶರಣಯ್ಯ ನಾಯಕ ಗುಡದ್ದಿನ್ನಿ, ದೇವೇಂದ್ರಪ್ಪ, ಎಚ್. ಶರ್ಫುದ್ದೀನ್ ಪೋತ್ನಾಳ, ಸಿದ್ದಲಿಂಗಪ್ಪ ವಕೀಲರು, ವಸಂತ ಕೊಡ್ಲಿ, ಸತ್ತಾರ್ ಬಂಗ್ಲೆವಾಲೆ, ಹಂಪಯ್ಯ ನಾಯಕ, ಕಾಮೇಶ, ಮಂಜುನಾಥ ನಾಯಕ ಪೋತ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.