ಭಾರತ ಕೃಷಿ ಪ್ರಧಾನ ದೇಶ. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶವನ್ನೂ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮಗೆ ಹೆತ್ತ ತಾಯಿಯಷ್ಟೇ ಪೂಜ್ಯಳು. ‘ಮಾತಾ ಭೂಮಿಃ ಪುತ್ರೋಽಹಂ ಪೃಥಿವ್ಯಾಃ’ ಎಂದು ನಮ್ಮ ಭೂಮಿ ಸೂಕ್ತದಲ್ಲಿ ಹೇಳಲಾಗಿದೆ. ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಹುಟ್ಟಿದ, ಬೆಳೆದ, ನಡೆದಾಡುವ ಈ ಭೂಮಿ ನಮ್ಮ ಜನನಿ ಮತ್ತು ನಾವೆಲ್ಲರೂ ಆಕೆಯ ಮಕ್ಕಳು. ಆದ್ದರಿಂದಲೇ ನಮ್ಮ ಹಿರಿಯರು ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಎಂದು ಹೇಳಿದ್ದಾರೆ. ಅಂದರೆ, ನಾವು ಜನಿಸಿದ ಭೂಮಿ ನಮಗೆ ಸ್ವರ್ಗಕ್ಕಿಂತಲೂ ಶ್ರೇಷ್ಠವಾದುದು.

ಭೂಮಿಯೊಂದಿಗಿನ ನಮ್ಮ ಸಂಬಂಧ ತಾಯಿ-ಮಕ್ಕಳ ಸಂಬಂಧದಂತೆ ಎಂಬುದು ಹಲವು ವಿಧಗಳಲ್ಲಿ ವೇದ್ಯವಾಗುತ್ತದೆ. ಮುಂಜಾನೆ ತಾಯಂದಿರು ಎದ್ದೊಡನೆ ‘ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ? ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯಿ, ಎದ್ದೊಂದು ಗಳಿಗೆ ನೆನೆದೇನ’ ಎಂದು ನೆಲ ಮುಟ್ಟಿ ನಮಸ್ಕರಿಸುತ್ತಾರೆ.

ಆಟವಾಡುವ ಪ್ರತಿಯೊಬ್ಬ ಕ್ರೀಡಾಪಟುವೂ ನೆಲವನ್ನು ಮುಟ್ಟಿ ನಮಸ್ಕರಿಸಿ, ಗೆಲುವಿಗಾಗಿ ಪ್ರಾರ್ಥಿಸಿ ತನ್ನ ಆಟವನ್ನು ಪ್ರಾರಂಭಿಸುತ್ತಾನೆ. ಆತನ ಎದುರಾಳಿಯೂ ಅದೇ ಭೂತಾಯಿಯನ್ನು, ಅಂದರೆ ನೆಲವನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇದೇ ನಮ್ಮ ಭಾರತೀಯ ಪರಂಪರೆಯ ಸೊಗಡು. ಪರಸ್ಪರ ಎದುರಾಳಿಗಳಿಗೂ ಭೂತಾಯಿ ಮಾತೃಸ್ವರೂಪಳು.

ತನ್ನ ಹೊಲವನ್ನು ಉತ್ತುವ ರೈತ ಕೂಡ ‘ಅಮ್ಮಾ, ಬಂಗಾರದಂತಹ ಬೆಳೆ ಕೊಡು’ ಎಂದು ಬೇಡಿಕೊಳ್ಳುತ್ತಾನೆ. ಇದು ನಮ್ಮ ಭಾರತೀಯ ಪರಂಪರೆಯ ಶ್ರೀಮಂತಿಕೆಯೂ ಹೌದು. ಭೂತಾಯಿಯೆಡೆಗಿನ ಶ್ರದ್ಧೆ ಅನನ್ಯ. ಅದು ಭಾವಕ್ಕೆ ನಿಲುಕದ್ದು, ಭಾವನಾತೀತವಾದುದು.

ನಮ್ಮ ಸಂಸ್ಕೃತ ಕಾವ್ಯಗಳಲ್ಲಿ ಮತ್ತು ಯೋಗದ ಪಠ್ಯಗಳಲ್ಲಿ,

‘ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ ।\ ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ॥’

ಎಂದು ಭೂತಾಯಿಯನ್ನು ಬೇಡಿಕೊಳ್ಳುತ್ತಾರೆ.

ಇದರ ತಾತ್ಪರ್ಯವಿಷ್ಟೇ: ಸಮುದ್ರವೇ ನಿನ್ನ ವಸ್ತ್ರ, ಪರ್ವತಗಳೇ ನಿನ್ನ ಸ್ತನಮಂಡಲಗಳು. ವಿಷ್ಣುಪತ್ನಿಯಾದ ಭೂತಾಯಿಯೇ, ನಾನು ನನ್ನ ಕೆಲಸಕಾರ್ಯಗಳಿಗಾಗಿ ನಿನ್ನನ್ನು ತುಳಿಯುತ್ತೇನೆ, ನಿನ್ನ ಮೇಲೆ ನಡೆದಾಡುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು ತಾಯಿ ಎಂದು ಪ್ರಾರ್ಥಿಸುವುದು.

ಹೀಗೆ ಭೂಮಿ ಮತ್ತು ಮನುಷ್ಯನ ಸಂಬಂಧ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತಾಯಿ-ಮಕ್ಕಳ ಸಂಬಂಧದಂತೆ ಹಾಸುಹೊಕ್ಕಾಗಿದೆ. ಅದರಲ್ಲಿಯೂ ರೈತನನ್ನು ಭೂತಾಯಿಯ ಚೊಚ್ಚಲ ಮಗ ಎಂದೇ ಕರೆಯುತ್ತಾರೆ.

ಭೂತಾಯಿ ನಮಗೆ ಜೀವನಕ್ಕೆ ಅವಶ್ಯಕವಾದ ಆಹಾರ ಮತ್ತು ನೀರನ್ನು ದಯಪಾಲಿಸುತ್ತಾಳೆ. ನಮ್ಮನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಾಳೆ. ಮುಂದೆ ನಾವು ಮಡಿದ ಮೇಲೆಯೂ ಮತ್ತೆ ತನ್ನ ಉದರದಲ್ಲಿ ನಮಗೆ ಆಶ್ರಯ ನೀಡುತ್ತಾಳೆ.

ಶ್ರಾವಣ ಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲುಸಾಲು ಮೆರವಣಿಗೆಯೇ ಹೊರಡುತ್ತದೆ. ಅದರಲ್ಲಿ ಶೀಗಿ ಹುಣ್ಣಿಮೆಯೂ ಒಂದು.

ದಸರೆಯ ನಂತರ ಆಶ್ವಯುಜ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ಬಯಲುಸೀಮೆಯ ಜನರು ಶೀಗಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇದನ್ನು ಕರ್ನಾಟಕದ ಕೆಲವೆಡೆ ಭೂಮಿ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಈ ಸಮಯದಲ್ಲಿ ಮಳೆಗಾಲ ಸ್ವಲ್ಪ ಹಿಂದೆ ಸರಿದು, ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು, ತೆನೆಗಳು ಕಣ್ಸೆಳೆಯುತ್ತಿರುತ್ತವೆ. ಹೊಲದ ಪ್ರತಿಯೊಂದು ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕಾರ್ಯ ಆರಂಭವಾಗುವ ಕೆಲವೇ ದಿನಗಳ ಮುಂಚೆ, ಈ ದಿನದಂದು ರೈತನು ಭೂತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ. ಜೊತೆಗೆ ತನ್ನ ಬಂಧುಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಂಭ್ರಮಿಸುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ.

ಶೀಗಿ ಹುಣ್ಣಿಮೆಗೆ ಹಲವಾರು ದಿನಗಳ ಮುಂಚೆಯೇ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆಯೆಂದ ಮೇಲೆ ಅಂಕಿ-ಸಂಖ್ಯೆಗಳು ಮುಖ್ಯವಲ್ಲ, ಜನರ ಹೊಟ್ಟೆ ತುಂಬುವುದು ಮುಖ್ಯ.

ತೆಳ್ಳಗೆ ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳು, ಬಗೆಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ (ನವಣೆ ಅಕ್ಕಿಯನ್ನು ಹುರಿದು ಮಾಡುವ ಒಂದು ಸಿಹಿ ಪದಾರ್ಥ), ಕರ್ಚಿಕಾಯಿಗಳು ಮೊದಲೇ ತಯಾರಾಗುತ್ತವೆ.

ಹಬ್ಬದ ದಿನ ಎಣ್ಣೆ ಬದನೆಕಾಯಿ ಪಲ್ಯ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನಕಾಯಿ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಸಿಯಾಗಿಯೇ ತಿನ್ನಬಹುದಾದ ಈರುಳ್ಳಿ, ಸೌತೆಕಾಯಿ, ಗಜ್ಜರಿ, ಮೆಂತ್ಯ ಸೊಪ್ಪು ಮುಂತಾದವುಗಳನ್ನು ಸಿದ್ಧಪಡಿಸಲಾಗುತ್ತದೆ.

ಇದರ ಜೊತೆಗೆ ಭೂತಾಯಿಯ ಎಡೆಗಾಗಿ ಕುಚ್ಚಗಡಬು, ಸಜ್ಜೆ ಕಡುಬು, ಜೋಳದ ಕಡುಬು, ಚಿತ್ರಾನ್ನ, ಮೊಸರನ್ನದ ಬುತ್ತಿ, ಕರಿದ ಹಪ್ಪಳ, ಸಂಡಿಗೆ, ಮೆಣಸಿನಕಾಯಿ ಬಾಳಕಗಳು ಹೀಗೆ ಹಲವಾರು ಬಗೆಯ ಪದಾರ್ಥಗಳನ್ನು ತಯಾರಿಸಿ ಒಂದೊಂದೇ ಡಬ್ಬಗಳಲ್ಲಿ ಶೇಖರಿಸಲಾಗುತ್ತದೆ.

ಆ ಎಲ್ಲ ಡಬ್ಬಗಳನ್ನು ಶುದ್ಧವಾದ ಹಸಿ ವಸ್ತ್ರದಿಂದ ಒರೆಸಿ, ವಿಭೂತಿ ಪಟ್ಟಿಯನ್ನು ಬರೆದು, ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಹೇರಲಾಗುತ್ತದೆ.

ಹೆಂಗಳೆಯರು ಇಳಕಲ್ ಸೀರೆ, ಕುಪ್ಪಸ, ರೇಷ್ಮೆ ಸೀರೆಗಳನ್ನು ಧರಿಸಿ, ಬೋರಮಾಳ ಸರ, ಗುಂಡಿನ ಸರ, ಟೀಕಿ ಸರ, ಕಾಸಿನ ಸರ, ಗುಂಡುಹಚ್ಚಿನ ಸರ, ಪಾಟಲಿ, ಬಿಲವಾರ, ಹಸಿರು, ಕೆಂಪು ಮತ್ತು ಚುಕ್ಕಿಯ ಬಳೆಗಳನ್ನು ಧರಿಸಿ ಸೆರಗು ಹೊತ್ತು ಅಲಂಕರಿಸಿಕೊಳ್ಳುತ್ತಾರೆ.

ಇತ್ತೀಚಿನ ನೀರೆಯರು ನಾವೇನು ಕಡಿಮೆ ಎಂಬಂತೆ ಜರತಾರಿ ಸೀರೆಗಳೊಂದಿಗೆ ಹಳೆಯ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಧರಿಸಿ ಸಿದ್ಧರಾಗುತ್ತಾರೆ.

ಮಕ್ಕಳಿಗಂತೂ ಹಬ್ಬವೋ ಹಬ್ಬ! ತಂದೆ, ಅಜ್ಜಂದಿರಿಗೆ ದನಗಳನ್ನು ಹಳ್ಳಕ್ಕೆ ಕರೆದೊಯ್ದು ಸ್ನಾನ ಮಾಡಿಸಲು ಹಾಗೂ ಸಿಂಗರಿಸಲು ಅವರ ಸಹಾಯಹಸ್ತ ಇದ್ದೇ ಇರುತ್ತದೆ.

ದನಕರುಗಳನ್ನು ಹಳ್ಳಗಳಲ್ಲಿ ಮೀಯಿಸಿ, ಕೊಂಬುಗಳಿಗೆ ಬಣ್ಣ ಬಳಿದು, ಅವುಗಳ ಬೆನ್ನ ಮೇಲೆ ಜರತಾರಿ ಸೀರೆಯಿಂದ ತಯಾರಿಸಿದ ಅಂಗವಸ್ತ್ರಗಳನ್ನು ಹೊದಿಸಲಾಗುತ್ತದೆ. ಕೋಡಣಸು, ಕೊಂಬಿನ ಸರಗಳನ್ನು ಧರಿಸಿ, ಕೊಂಬುಗಳನ್ನು ಶೃಂಗರಿಸಿದ ನಂತರ ಎಲ್ಲರೂ ಭೂತಾಯಿಯ ಪೂಜೆ ಸಲ್ಲಿಸಲು ಹೊಲಕ್ಕೆ ಸಾಗುತ್ತಾರೆ.

ಒಟ್ಟಿನಲ್ಲಿ ಕಣ್ಣಿಗೆ ಹಬ್ಬದ ವಾತಾವರಣ, ಸಂಭ್ರಮ-ಸಡಗರದ ಕಳೆ. ಎತ್ತುಗಳ ಕೊರಳಲ್ಲಿರುವ ಗಂಟೆಯ ಝೇಂಕಾರ, ಚಕ್ಕಡಿ ಹೊಡೆಯುವವನ ಹುಂಕಾರ, ಮರದ ಗಾಲಿಯ ಕಿರುಗುಟ್ಟುವ ಶಬ್ದ, ಗಾಲಿಗೆ ಕೋಲಿಟ್ಟು ಸದ್ದು ಮಾಡುವ ರೀತಿ ಮನಮೋಹಕವಾಗಿರುತ್ತದೆ.

ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿರುವ ಒಂದು ಅಚ್ಚುಕಟ್ಟಾದ ಜಾಗವನ್ನು, ಹೆಚ್ಚಾಗಿ ಬನ್ನಿ ಗಿಡವಿರುವ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾನೆ. ಅಲ್ಲಿಯೇ ಜಮಖಾನೆ ಹಾಸಿ, ಬನ್ನಿ ಗಿಡದ ಕೆಳಗೆ ಐದು ಕಲ್ಲುಗಳನ್ನು ಪಂಚಪಾಂಡವರ ರೂಪದಲ್ಲಿ ಹಾಗೂ ಹಿಂದೆ ಕರ್ಣನ ಹೆಸರಿನಲ್ಲಿ (ಕೆಲವರು ‘ಕಳ್ಳ’ ಎಂದು ಅಪಭ್ರಂಶ ಮಾಡಿದ್ದಾರೆ) ಇನ್ನೊಂದು ಕಲ್ಲನ್ನು ಪ್ರತಿಷ್ಠಾಪಿಸುತ್ತಾನೆ.

ಬಳಿಕ ಭೂತಾಯಿಯನ್ನು ಬನ್ನಿ ಮರದಲ್ಲಿ ಆವಾಹನೆ ಮಾಡಿ, ಪೂಜಿಸಿ, ಮಂಗಳಾರತಿ ಬೆಳಗಿ, ಕಾಯಿ ಒಡೆದು ನೈವೇದ್ಯ ಸಮರ್ಪಿಸುತ್ತಾನೆ.

‘ಚಂದ್ರಗಾವಿಯ ಸೀರಿ ಚಂದಾಕ ತಂದೀನಿ, ಭೂಮಿ ತಾಯವ್ವ ಉಡು ಬಾರ, ನಮ್ಮವ್ವ ರಾಶಿಗೆ ಹುಲಸು ಕೊಡು ಬಾರ, ಹಸಿರು ಸೀರಿ ಉಟ್ಟು ಬಸರಾದಳು, ಭೂತಾಯಿ ಬಸರಾದ ಅವಳ ನಡು, ಚಂದ ಮಲೆನಾಡ ಸೂಸುವ ಭತ್ತದಂಗ ಬಳುಕ್ಯಾಳು.’

ಎಂದು ಭೂತಾಯಿಯನ್ನು ಕೊಂಡಾಡುತ್ತಾರೆ.

ಪಾಂಡವರನ್ನು ಪೂಜಿಸುವ ಹಿಂದೆಯೂ ಒಂದು ಕಥೆಯಿದೆ.

ಅಜ್ಞಾತವಾಸದಲ್ಲಿದ್ದ ಪಾಂಡವರು ಹಸಿವಿನಿಂದ ತತ್ತರಿಸುತ್ತಾ ಹೊಲದ ಬಳಿ ಬಂದಾಗ, ಅಲ್ಲಿ ರೈತ ದಂಪತಿಗಳು ಬನ್ನಿ ಮರದ ಕೆಳಗೆ ಭೂತಾಯಿಯ ಪೂಜೆ ಮಾಡಿ ಆಹಾರ ಸ್ವೀಕರಿಸಲು ಅಣಿಯಾಗಿರುತ್ತಾರೆ.

ಸಮಯಕ್ಕೆ ಸರಿಯಾಗಿ ಬಂದ ಅಭ್ಯಾಗತರನ್ನು ಸ್ವಾಗತಿಸಿದ ರೈತ ದಂಪತಿಗಳು ಅವರಿಗೆ ಊಟ ಬಡಿಸಲು ಮುಂದಾಗುತ್ತಾರೆ. ಆದರೆ, ತಟ್ಟೆ ಅಥವಾ ಎಲೆ ಇರುವುದಿಲ್ಲ. ಆಗ ಮಾರುವೇಷದಲ್ಲಿದ್ದ ಧರ್ಮರಾಜನು ಮೇಲಿದ್ದ ಬನ್ನಿ ಮರದ ಎಲೆಯನ್ನು ಹರಿದು, ಅದರಲ್ಲಿಯೇ ಊಟ ಬಡಿಸುವಂತೆ ದಂಪತಿಗಳನ್ನು ಕೇಳಿಕೊಳ್ಳುತ್ತಾನೆ.

ಅಷ್ಟು ಪುಟ್ಟ ಬನ್ನಿ ಎಲೆಯಲ್ಲಿ ಆಹಾರ ಹಿಡಿಸುವುದೇ ಎಂದು ಸೋಜಿಗದಿಂದ ರೈತ ದಂಪತಿಗಳು ಬಡಿಸುತ್ತಾ ಹೋದರೂ ಎಲೆ ತುಂಬುವುದೇ ಇಲ್ಲ. ಆದರೆ ಪಂಚಪಾಂಡವರು ತೃಪ್ತಿಯಿಂದ ಊಟ ಮಾಡುತ್ತಾರೆ.

ಅಷ್ಟೇ ಅಲ್ಲದೆ, ತಮಗೆ ಉಣಬಡಿಸಿದ ರೈತ ದಂಪತಿಗಳಿಗೆ ತಾವು ಯಾವತ್ತೂ ರೈತನ ಹೊಲ ಕಾಯುವ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಮಾತು ಕೊಡುತ್ತಾರೆ. ಅದಕ್ಕೆ ರೈತ ದಂಪತಿಗಳು, ‘ಪ್ರತಿವರ್ಷವೂ ಶೀಗಿ ಹುಣ್ಣಿಮೆಯ ಈ ದಿನ ನಿಮ್ಮನ್ನು ನಾವು ಸತ್ಕರಿಸುತ್ತೇವೆ’ ಎಂದು ಪ್ರತಿಯಾಗಿ ಹೇಳುತ್ತಾರೆ.

ಈ ಕಥೆಯ ಮತ್ತೊಂದು ನಿರೂಪಣೆಯ ಪ್ರಕಾರ, ಅಜ್ಞಾತವಾಸಕ್ಕೂ ಮುನ್ನವೇ ಕರ್ಣನು ತಮ್ಮ ಸಹೋದರನೆಂಬ ಅರಿವಿದ್ದ ಪಾಂಡವರು ಮತ್ತೊಂದು ಬನ್ನಿ ಎಲೆಯಲ್ಲಿ ತಮ್ಮ ಸಹೋದರ ಕರ್ಣನಿಗಾಗಿ ಆಹಾರವನ್ನು ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ.

ನಂತರ ನೈವೇದ್ಯ ಮಾಡಿದ ಆಹಾರದ ಒಂದು ಭಾಗವನ್ನು ಭೂಮಿಯಲ್ಲಿ ಗುಳಿ ತೋಡಿ ಅದರಲ್ಲಿ ಸಮರ್ಪಿಸುತ್ತಾರೆ. ಇನ್ನುಳಿದ ನೈವೇದ್ಯದ ಭಾಗವನ್ನು ಚರಗ ಚೆಲ್ಲಲು ತೆಗೆದುಕೊಂಡು ಹೋಗುತ್ತಾರೆ.

ನೈವೇದ್ಯ ಹಿಡಿದ ವ್ಯಕ್ತಿ ‘ಹುಲ್ಲುಲ್ಲಿಗೋ’ ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಎಡೆಯಿಂದ ಸ್ವಲ್ಪಸ್ವಲ್ಪ ಭಾಗವನ್ನು ಹೊಲದ ಸುತ್ತಲೂ ಚೆಲ್ಲುತ್ತಾ ಸಾಗುತ್ತಾನೆ. ಹಿಂದೆ ಸಾಗುವ ಮಕ್ಕಳು ‘ಚಳ್ಳಂಬರಿಗೋ’ ಎಂದು ಕೂಗುತ್ತಾ ಹೋಗುತ್ತಾರೆ.

‘ಹುಲ್ಲುಲ್ಲಿಗೋ’ ಎಂದರೆ ಹೊಲದಲ್ಲಿರುವ ಪ್ರತಿಯೊಂದು ಹುಲ್ಲಿನ ಕಣಕ್ಕೂ, ‘ಚಳ್ಳಂಬರಿಗೋ’ ಎಂದರೆ ಪ್ರತಿಯೊಂದು ಬೇರಿಗೂ ಈ ಆಹಾರವು ಮುಟ್ಟಲಿ ಎಂಬುದು ರೈತನ ಆಶಯ.

ಜೊತೆಗೆ ಹೊಲದಲ್ಲಿರುವ ಎಲ್ಲ ಕ್ರಿಮಿಕೀಟಗಳಿಗೂ ರೈತ ಚರಗ ಚೆಲ್ಲುವ ಮೂಲಕ ಆಹಾರ ಸಲ್ಲಿಸುತ್ತಾನೆ. ತನ್ಮೂಲಕ ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತಾನೆ.

ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧುಬಾಂಧವರೊಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತದೆ.

ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು. ಸವಿದಷ್ಟು ಸವಿ ಹೆಚ್ಚಾಗುವ, ಮೊಗೆದಷ್ಟೂ ಬಸಿಯುವ ನೀರಿನ ಊಟೆಯಂತೆ!

ತನ್ನಲ್ಲಿರುವ ಎಲ್ಲವನ್ನೂ ಇತರರೊಂದಿಗೆ ಸಂತೋಷದಿಂದ ಹಂಚಿಕೊಂಡು, ಅವರ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುವ ವಿಶಿಷ್ಟ ಗುಣ ರೈತನದು. ಹೀಗೆ ರೈತ ಸಂತಸ ಪಡಲು ಆತನ ಕೊಡುವ ಗುಣವೇ ಕಾರಣವಾಗಿದೆ.

ಈ ರೀತಿಯಾಗಿ ಶೀಗಿ ಹುಣ್ಣಿಮೆಯನ್ನು ಉತ್ತರ ಕರ್ನಾಟಕದ ಬಯಲುಸೀಮೆಯ ಭಾಗದಲ್ಲಿ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ.

ನೀವು ಕೂಡ ಹತ್ತಿರದ ಯಾವುದಾದರೂ ಊರಿನ ಹೊಲಕ್ಕೆ ಹೋದರೆ ಅಲ್ಲಿಯ ರೈತರು ನಿಮ್ಮನ್ನೂ ಕರೆದು ಉಣಬಡಿಸುವುದರಲ್ಲಿ ಸಂದೇಹವೇ ಇಲ್ಲ.

ಈ ರೀತಿ ಭೂತಾಯಿಯನ್ನು ಪೂಜಿಸುವ ರೈತ ಯಾವಾಗಲೂ ನಗುನಗುತ್ತಾ ಇರಲಿ. ಆತನ ಬಾಳು ಹಸನಾಗಲಿ. ರೈತ ಜಗದ ಬೆಳಕಾಗಲಿ ಎಂಬ ಆಶಯದೊಂದಿಗೆ...

ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ, ಗದಗ.