ಹಟ್ಟಿ ಚಿನ್ನದ ಗಣಿ, ಅ. 26: ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ, ಹಟ್ಟಿ ಚಿನ್ನದ ಗಣಿ ಕಂಪನಿಯ ಹಳೆ ಸಿಟಿ ಆಫೀಸ್ ಹಾಗೂ ಎಸ್‌ಸಿ-ಎಸ್‌ಟಿ ಸಂಘದ ವತಿಯಿಂದ ವಿವಿಧೆಡೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಯಂತಿ ಅಂಗವಾಗಿ ವಾಲ್ಮೀಕಿ ಸಮಾಜದ ಮುಖಂಡರು, ಗಣಿ ಕಂಪನಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಶಫಿ, ಮಹನೀಯರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಆದರ್ಶಗಳು ಮತ್ತು ಜೀವನ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವಾಗಬೇಕು. ಮಹರ್ಷಿ ವಾಲ್ಮೀಕಿ ಅವರು ತಮ್ಮ ಸಾಹಿತ್ಯದ ಮೂಲಕ ಸತ್ಯ, ಧರ್ಮ, ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ಸಾರಿದ್ದಾರೆ. ಅವರ ಚಿಂತನೆಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಹೇಳಿದರು.

ಸಮಾಜದ ಮುಖಂಡ ಶಿವರಾಜಗೌಡ ಗುರಿಕಾರ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ಮಹನೀಯರಲ್ಲ. ಇಡೀ ಮಾನವಕುಲಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ದಾರ್ಶನಿಕರಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ಆದರ್ಶ ಬದುಕು, ಕುಟುಂಬದ ಜವಾಬ್ದಾರಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸಾಹಿತ್ಯ ಮತ್ತು ಚಿಂತನೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗಣಿ ಕಂಪನಿಯ ಪ್ರಭಾರಿ ಹಿರಿಯ ವ್ಯವಸ್ಥಾಪಕ (ಮಾಸ) ಯಮನೂರಪ್ಪ, ಕಾರ್ಮಿಕ ಮುಖಂಡ ಸಿದ್ದಪ್ಪ ಮುಂಡರಗಿ, ಎಸ್‌ಸಿ-ಎಸ್‌ಟಿ ಸಂಘದ ಅಧ್ಯಕ್ಷ ಜಮದಗ್ನಿ ಕೋಟಾ, ಶರಣಗೌಡ ಗುರಿಕಾರ, ಯಾಂಕೋಬ್ ಮಿಯ್ಯಾಪುರ, ಗ್ಯಾನಪ್ಪ, ಹನುಮಂತಗೌಡ, ಅಮರೇಶ ಬುದ್ಧಿನಿ, ನಾಗರಾಜ ನಾಯಕ, ಗುಂಡಪ್ಪಗೌಡ ಮಾಸ್ಟರ್, ಬಾಬು ಸಾಗರ, ಕುಪ್ಪಣ್ಣ, ಯಾಂಕೋಬ್ ಪೂಜಾರಿ, ಬಸವರಾಜಗೌಡ ಪೋ. ಪಾಟೀಲ್, ದಂಡಪ್ಪ, ಮಡಿವಾಳಪ್ಪಗೌಡ, ಜಡಿಯಪ್ಪ ಜಾಲಹಳ್ಳಿ, ರಾಮಣ್ಣ ಬೆಂಕಿ, ರಂಗನಾಥ, ರಂಗಪ್ಪ ಬುದ್ಧಿನಿ, ಮಾಲಪ್ಪ ಗಣೇಕಲ್, ಎಂ.ಸಿ. ಚಂದ್ರಶೇಖರ, ಅಂಜನೇಯಗೌಡ ಪೋ. ಪಾಟೀಲ್, ರಮೇಶ ಗಣೇಕಲ್, ಮಂಜುನಾಥ ಬೋಗರಮುಂಡಿ, ಮಾಲಪ್ಪ ಹೆಸರೂರು, ಧಣಿ ಬಿ.ಆರ್. ಗುಂಡ, ಕಿಚ್ಚ ರಾಮ, ಬುಜ್ಜ ನಾಯಕ, ಸುರೇಶಗೌಡ ಗುರಿಕಾರ, ಸುರೇಶ ನಾಯಕ, ಸಾಬಣ್ಣ, ರೆಬಲ್, ಚಂದ್ರಕಾಂತ, ಪಂಪಣ್ಣ, ಯಂಕೋಬ್ ಚಿಂಚರಕಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.