ಮಾನ್ವಿ, ಅ. 26: ತಾಲೂಕಿನ ಪೋತ್ನಾಳ್ ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಸಿಲುಕಿ ಕೃಷ್ಣಮೃಗವೊಂದು ಮೃತಪಟ್ಟಿದ್ದು, ವನ್ಯಜೀವಿಗಳ ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಭಾನುವಾರ ರಾತ್ರಿ ಪೋತ್ನಾಳ್ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಕೃಷ್ಣಮೃಗವೊಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವುದನ್ನು ಗಮನಿಸಿದ ಸಾರ್ವಜನಿಕರು, ಅದರ ಜೀವ ಉಳಿಸುವ ಉದ್ದೇಶದಿಂದ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಾಯಗೊಂಡಿದ್ದ ಕೃಷ್ಣಮೃಗವನ್ನು ವಾಹನದ ಮೂಲಕ ಮಾನ್ವಿಗೆ ಸಾಗಿಸಿದರು. ಆದರೆ ಅಪಘಾತದಿಂದ ಕೃಷ್ಣಮೃಗ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ನಿಯಮಾನುಸಾರ ಮೃತದೇಹವನ್ನು ವಿಲೇವಾರಿ ಮಾಡಲಾಗಿದೆ ಎಂದು ಮಾನ್ವಿ ವಲಯ ಅರಣ್ಯಾಧಿಕಾರಿ ಪುರುಷೋತ್ತಮ ರಾವ್ ಜೀ ತಿಳಿಸಿದ್ದಾರೆ.

ರಾಯಚೂರು–ಸಿಂಧನೂರು ಚತುಷ್ಪಥ ರಾಜ್ಯ ಹೆದ್ದಾರಿಯ ಕಪಗಲ್, ಮಾನ್ವಿ ಪಟ್ಟಣದ ಹೊರವಲಯ ಹಾಗೂ ಪೋತ್ನಾಳ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷ್ಣಮೃಗಗಳ ಸಂಚಾರ ಹೆಚ್ಚಾಗಿ ಕಂಡುಬರುತ್ತಿದೆ. ಆಹಾರ ಮತ್ತು ಕುಡಿಯುವ ನೀರಿಗಾಗಿ ವನ್ಯಜೀವಿಗಳು ರಸ್ತೆ ದಾಟಿ ಜನವಸತಿ ಪ್ರದೇಶಗಳ ಸಮೀಪಕ್ಕೂ ಬರುತ್ತಿರುವುದು ಸಾಮಾನ್ಯವಾಗಿದೆ.

ಇಂತಹ ಪ್ರದೇಶಗಳಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಂದ ಕೃಷ್ಣಮೃಗ ಸೇರಿದಂತೆ ಇತರ ವನ್ಯಜೀವಿಗಳ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೃಷ್ಣಮೃಗಗಳು ಹೆಚ್ಚಾಗಿ ಸಂಚರಿಸುವ ಸ್ಥಳಗಳನ್ನು ಅರಣ್ಯ ಇಲಾಖೆ ಗುರುತಿಸಿ, ಹೆದ್ದಾರಿಯ ಎರಡೂ ಬದಿಗಳಲ್ಲಿ ವನ್ಯಜೀವಿಗಳ ಸಂಚಾರದ ಕುರಿತು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಅಗತ್ಯವಿರುವ ಕಡೆ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಾಹನ ಸವಾರರು ಕೂಡ ವನ್ಯಜೀವಿಗಳ ಸಂಚಾರವಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕೃಷ್ಣಮೃಗ ಮತ್ತು ಚಿಗರೆಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.