ಮಾನ್ವಿ: ಪಟ್ಟಣದ ಲೊಯೋಲಾ ಸಮಾಜ ಸೇವಾ ಕೇಂದ್ರದ ವತಿಯಿಂದ ಗ್ರಾಮೀಣ ಕಲಿಕಾ ಕೇಂದ್ರಗಳ ಮಕ್ಕಳಿಗೆ ಮಕ್ಕಳ ಸಂಸತ್ ರಚನೆ ಕುರಿತು ಕಾರ್ಯಾಗಾರ ಹಾಗೂ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.

ಭಾರತದ ನಕ್ಷೆಯ ಮೇಲೆ ಸಂವಿಧಾನದ ಮೂಲ ಮೌಲ್ಯಗಳಾದ ಸ್ವಾತಂತ್ರ್ಯ, ನ್ಯಾಯ, ಏಕತೆ, ಸಮಾನತೆ ಹಾಗೂ ಭ್ರಾತೃತ್ವದ ಸಂದೇಶಗಳನ್ನು ಒಳಗೊಂಡ ಫಲಕಗಳನ್ನು ಅಂಟಿಸುವ ಮೂಲಕ ಲೊಯೋಲಾ ಸಮಾಜ ಸೇವಾ ಕೇಂದ್ರದ ಕ್ಷೇತ್ರಾಧಿಕಾರಿ ಫಾ. ಶಾಂತರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು, ಪ್ರಜಾಪ್ರಭುತ್ವದ ತತ್ವಗಳನ್ನು ಪರಿಚಯಿಸುವುದು ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಜವಾಬ್ದಾರಿ, ಸಹಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಮಕ್ಕಳ ಸಂಸತ್ತಿನ ರಚನೆ, ಅದರ ಕಾರ್ಯವಿಧಾನ ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಲಾಯಿತು. ಮಕ್ಕಳ ಸಂಸತ್ತಿನ ಅಧ್ಯಕ್ಷರು, ಶಿಕ್ಷಣ, ಆರೋಗ್ಯ ಮತ್ತು ಸ್ವಚ್ಛತೆ, ಕ್ರೀಡೆ ಹಾಗೂ ಪರಿಸರ ಸೇರಿದಂತೆ ವಿವಿಧ ವಿಭಾಗಗಳ ಕಾರ್ಯಚಟುವಟಿಕೆಗಳನ್ನು ಪರಿಚಯಿಸಲಾಯಿತು.

ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದು, ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಸಂಘಟಿತವಾಗಿ ಪರಿಹಾರ ಕಂಡುಕೊಳ್ಳುವ ಕುರಿತು ತರಬೇತಿಯಲ್ಲಿ ವಿವರಿಸಲಾಯಿತು.

ಕಾರ್ಯಕ್ರಮದಲ್ಲಿ ಪೋತ್ನಾಳದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಸಂಯೋಜಕ ಜಯಶೀಲ ಹಾಗೂ ಲೊಯೋಲಾ ಸಮಾಜ ಸೇವಾ ಕೇಂದ್ರದ ಸಂಯೋಜಕ ಮರಿಯಪ್ಪ ಮಾತನಾಡಿದರು.