ಲಿಂಗಸುಗೂರು: ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆ ಯುವಜನತೆಗೆ ಸ್ಫೂರ್ತಿದಾಯಕವಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ ನಾಗೇಂದ್ರ ಬಾಬು ಕುಮಾರ ಕರೆ ನೀಡಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ರಾಮಾಯಣದಂತಹ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಾಯಣವು ಕೇವಲ ಧಾರ್ಮಿಕ ಗ್ರಂಥವಾಗಿರದೆ, ಮಾನವೀಯ ಮೌಲ್ಯಗಳು, ನೈತಿಕತೆ ಹಾಗೂ ಉತ್ತಮ ಜೀವನ ನಡೆಸಲು ಮಾರ್ಗದರ್ಶನ ನೀಡುವ ಮಹತ್ವದ ಕೃತಿಯಾಗಿದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರಿದೀಪವಾಗಿದ್ದು, ಸತ್ಯ, ಧರ್ಮ, ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸತ್ಯಮ್ಮ, ಬಸವರಾಜ ರಜುಲಕಿಮಠ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ, ಸಮಾಜ ಕಲ್ಯಾಣಾಧಿಕಾರಿ ರವೀಂದ್ರ ಉಪ್ಪಾರ, ಅಮರೇಶ, ಹನುಮಂತ ಸೇರಿದಂತೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.



