ಮಾನ್ವಿ: ತಾಲೂಕಿನ ನಂದಿಹಾಳ ಹಳ್ಳದ ವ್ಯಾಪ್ತಿಯ ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದ್ದು, ಗೋಲದಿನ್ನಿ ಎಸ್ಕೇಪ್ ಕಾಲುವೆ ಮೂಲಕ ಹಳ್ಳಕ್ಕೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ಗೋಲದಿನ್ನಿ ಎಸ್ಕೇಪ್ ರೈತ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಅವರಿಗೆ ಮನವಿ ಸಲ್ಲಿಸಿದರು.
ನಂದಿಹಾಳ ಹಳ್ಳದ ಸಮೀಪ ಗೋಲದಿನ್ನಿ ಎಸ್ಕೇಪ್ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ವಿವರಿಸಿ, ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಶಂಕ್ರಯ್ಯ ಸ್ವಾಮಿ, ಬರಗಾಲದ ಪರಿಣಾಮ ನಂದಿಹಾಳ ಹಳ್ಳದ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರುಗಳಿಗೂ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಜನರ ಜೀವನೋಪಾಯಕ್ಕೆ ಕೃಷಿ ಹಾಗೂ ಪಶುಸಂಗೋಪನೆ ಪ್ರಮುಖ ಆಧಾರವಾಗಿವೆ. ಆದರೆ ನೀರಿನ ಕೊರತೆಯಿಂದ ಜನರ ದೈನಂದಿನ ಜೀವನದ ಜೊತೆಗೆ ಜಾನುವಾರುಗಳ ನಿರ್ವಹಣೆಯೂ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಗೋಲದಿನ್ನಿ ಎಸ್ಕೇಪ್ ಕಾಲುವೆಯಿಂದ ನಂದಿಹಾಳ ಹಳ್ಳಕ್ಕೆ ತಕ್ಷಣ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದು ಆಡಳಿತದ ಗಮನದಲ್ಲಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕೆರೆಗಳು ಭರ್ತಿಯಾದ ನಂತರ ಗೋಲದಿನ್ನಿ ಎಸ್ಕೇಪ್ ಕಾಲುವೆಯಿಂದ ನಂದಿಹಾಳ ಹಳ್ಳಕ್ಕೆ ನೀರು ಹರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ, ಗ್ರಾಮಸ್ಥರು ಮುಂದಿಟ್ಟಿರುವ ಇತರ ಬೇಡಿಕೆಗಳಿಗೂ ಸ್ಪಂದಿಸಲಾಗುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ಬಸ್ ನಿಲ್ದಾಣ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸುಧಾರಿಸುವ ಉದ್ದೇಶದಿಂದ ದುರಸ್ತಿಗೊಂಡಿರುವ ಕೊಳವೆಬಾವಿಗಳನ್ನು ಸರಿಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ನೀರಿನ ಅಭಾವದಿಂದ ಸಂಕಷ್ಟ ಎದುರಿಸುತ್ತಿರುವ ಗ್ರಾಮಸ್ಥರು ಹಾಗೂ ರೈತರ ಬೇಡಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಮನಗೌಡ ನಂದಿಹಾಳ, ರಾಮಕೃಷ್ಣ ಅಮರಾವತಿ, ಶರಣಬಸವ ನಂದಿಹಾಳ, ವೀರಭದ್ರಗೌಡ ಬೋಗವತಿ, ಶ್ರೀಧರಸ್ವಾಮಿ, ಜಗದೀಶ ಓತೂರು ಕೋಟ್ನೇಕಲ್, ಶಶಿಧರಗೌಡ ನೀರಮಾನ್ವಿ, ಮಲ್ಲಭದ್ರಗೌಡ ನೀರಮಾನ್ವಿ, ಬಸವಗೌಡ ನಂದಿಹಾಳ, ಚನ್ನಪ್ಪಗೌಡ ನಂದಿಹಾಳ, ಈರಯ್ಯ ಪೂಜಾರಿ, ಶಿವಕುಮಾರಗೌಡ ಅಮರಾವತಿ, ವಕೀಲ ಸತ್ಯನಾರಾಯಣ, ಗಡಿಲಿಂಗಪ್ಪ ಬುದ್ದಿನಿ, ಸಂತೋಷ ಜಾನೇಕಲ್, ಶರೀಫ್ ನಸಲಾಪೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.



