ಮಾನ್ವಿ: ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸವ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಮಾನ್ವಿ ಮಂಡಲದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಬಸವ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಾನ್ವಿ ಮಂಡಲ ಅಧ್ಯಕ್ಷ ವೀರಭದ್ರಗೌಡ ಭೋಗವತಿ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈಶಾನ್ಯ ಶಿಕ್ಷಕರ ಕ್ಷೇತ್ರವು ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಈ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಶೀಲ್ ಜಿ. ನಮೋಶಿ ಸ್ಪರ್ಧಿಸಿದ್ದರು. ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಮಾನ್ವಿಯ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾನ್ವಿ ಮಂಡಲ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರು, ಮಾಜಿ ಅಧ್ಯಕ್ಷ ಜೆ. ಸುಧಾಕರ್, ಮುಖಂಡರಾದ ವಕೀಲ ವೀರನಗೌಡ, ಶ್ರೀಧರ ಸ್ವಾಮಿ, ಜಗದೀಶ್ ವತ್ತೂರು, ವಕೀಲ ರಾಯಪ್ಪ, ಶಿವಲಿಂಗಯ್ಯ ಸ್ವಾಮಿ, ಚಂದ್ರಶೇಖರ ನಾಯಕ, ರವಿಕುಮಾರ ಆಲ್ದಾಳ, ಕುಮಾರಸ್ವಾಮಿ ಮೇದಾರ, ಬಸನಗೌಡ ಕರಡಿಗುಡ್ಡ, ವಿರುಪಾಕ್ಷಿಗೌಡ ನುಡೋಣಿ, ಗೋಪಾಲ ಇಬ್ರಾಂಪುರ, ಕೆ. ವೆಂಕಟೇಶ, ಈರಣ್ಣ ನಾಯಕ, ಸುನೀಲ ಸ್ವಾಮಿ, ವಿಜಯಕುಮಾರ್ ಮೇಟಿ, ರಾಜೇಂದ್ರ ವಟಗಲ್, ಭಾಸ್ಕರ್ ಜಗಲಿ, ಬಸವರಾಜ ಗುತ್ತೇದಾರ, ಜಗದೀಶ ಕುರ್ಡಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.