ಮಾನ್ವಿ: ತಾಲೂಕಿನ ಜಾನೇಕಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯ ಸ್ಥಳಾವಕಾಶ ಕಲ್ಪಿಸುವುದರ ಜೊತೆಗೆ ಗ್ರಾಮದಲ್ಲಿನ ವಸತಿರಹಿತ ಕುಟುಂಬಗಳಿಗೆ ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೋಸರಾಜು ಅವರನ್ನು ಭೇಟಿಯಾದ ಗ್ರಾಮಸ್ಥರು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿದೆ. ಆದರೆ ಶಾಲಾ ಆವರಣದಲ್ಲಿ ಸಾಕಷ್ಟು ಜಾಗವಿಲ್ಲದ ಕಾರಣ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅಡಚಣೆಯಾಗಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದ್ದು, ಶಾಲೆಯ ಅಭಿವೃದ್ಧಿಗಾಗಿ ಸೂಕ್ತ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಗ್ರಾಮದಲ್ಲಿ ಸ್ವಂತ ನಿವೇಶನವಿಲ್ಲದೆ ವಾಸಿಸುತ್ತಿರುವ ಬಡ ಹಾಗೂ ವಸತಿರಹಿತ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳಡಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ನಿವೇಶನ ದೊರೆತಲ್ಲಿ ಅರ್ಹ ಫಲಾನುಭವಿಗಳು ಮನೆ ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಮಸ್ಥರ ಅಹವಾಲು ಆಲಿಸಿದ ಎನ್.ಎಸ್. ಬೋಸರಾಜು ಮಾತನಾಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಜಾನೇಕಲ್ ಗ್ರಾಮದ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಎರಡು ಎಕರೆ ಭೂಮಿಯನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿತ್ತು. ಆದರೆ ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ಆ ಭೂಮಿಯನ್ನು ಉದ್ದೇಶಿತ ವಸತಿ ಯೋಜನೆಗೆ ಬಳಸಿಕೊಳ್ಳದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಸತಿ ನಿಗಮಕ್ಕೆ ನೀಡಿರುವ ಭೂಮಿಯ ಪ್ರಸ್ತುತ ಸ್ಥಿತಿಗತಿ ಪರಿಶೀಲಿಸಿ, ಅರ್ಹ ವಸತಿರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದ ಯೋಜನೆಗಳ ಪ್ರಯೋಜನಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಗ್ರಾಮದ ಸಮೀಪದ ಮತ್ತೊಂದು ಸರ್ವೆ ಸಂಖ್ಯೆಯಲ್ಲಿ ಒಂಬತ್ತು ಎಕರೆ ಭೂಮಿ ಲಭ್ಯವಿರುವ ಕುರಿತು ಮಾಹಿತಿ ಪಡೆದ ಅವರು, ಅದರಲ್ಲಿ ಎರಡು ಎಕರೆ ಭೂಮಿಯನ್ನು ಸರ್ಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಅವರಿಗೆ ಸೂಚಿಸಿದರು.

ಶಾಲೆಗೆ ಅಗತ್ಯ ಭೂಮಿ ದೊರೆತರೆ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣದ ಜೊತೆಗೆ ಮುಂದಿನ ದಿನಗಳಲ್ಲಿ ಇತರ ಶೈಕ್ಷಣಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಗ್ರಾಮದ ಶಾಲಾ ಅಭಿವೃದ್ಧಿ ಹಾಗೂ ವಸತಿರಹಿತ ಕುಟುಂಬಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಹಮ್ಮದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಕ್ತಾರ್ ಸಾಬ್, ಮಾನ್ವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಬಿ.ಕೆ. ಅಂಬರೇಶಪ್ಪ ವಕೀಲರು, ಮಹಾಂತೇಶ ಸ್ವಾಮಿ, ಸೈಯದ್ ಖಾಲಿದ್ ಖಾದ್ರಿ, ಜಿ. ನಾಗರಾಜ್, ಎ. ಬಾಲಸ್ವಾಮಿ ಕೊಡ್ಲಿ, ರಾಜಾ ಸುಭಾಶ್ಚಂದ್ರ ನಾಯಕ, ರಾಜಶೇಖರ್ ಪಾಟೀಲ್ ಜಾನೇಕಲ್, ಸಿದ್ದಲಿಂಗಪ್ಪ ವಕೀಲರು, ಗ್ರಾಮದ ಮುಖಂಡರಾದ ನೀಲಪ್ಪಗೌಡ ಜಾನೇಕಲ್, ಮೌನೇಶಗೌಡ ಜಾನೇಕಲ್, ಲಕ್ಷ್ಮಣ್, ಮಲ್ಲಿಕಾರ್ಜುನ್, ಅರ್ಜುನಪ್ಪ, ಚನ್ನಪ್ಪಗೌಡ ಬೆಟ್ಟದೂರು, ಸತ್ತಾರ್ ಬಂಗ್ಲೆವಾಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.