ರಾಯಚೂರು: ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೆ ನಾಡಿನ ಕಲೆ, ಸಾಹಿತ್ಯ, ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕು. ಯುವ ಸಮುದಾಯದಲ್ಲಿರುವ ವಿಶಿಷ್ಟ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು ಎಂದು ಸಾಹಿತಿ ಅಯ್ಯಪ್ಪಯ್ಯ ಹುಡಾ ಹೇಳಿದರು.

ನಗರದ ವೇದಾಂತ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವೇದಾಂತ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ಯುವಕ ಮತ್ತು ಯುವತಿಯಲ್ಲಿಯೂ ವಿಶೇಷವಾದ ಸಾಮರ್ಥ್ಯ ಹಾಗೂ ಸೃಜನಶೀಲತೆ ಅಡಗಿರುತ್ತದೆ. ಅದನ್ನು ಗುರುತಿಸಿ ಸೂಕ್ತ ಅವಕಾಶ ಕಲ್ಪಿಸಿದಾಗ ಉತ್ತಮ ಕಲಾವಿದರು, ಸಾಹಿತಿಗಳು ಹಾಗೂ ಕ್ರೀಡಾಪಟುಗಳು ರೂಪುಗೊಳ್ಳಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಸಂಗೀತ, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಜನೋತ್ಸವದಂತಹ ಕಾರ್ಯಕ್ರಮಗಳು ಯುವಕರನ್ನು ಸಾಂಸ್ಕೃತಿಕ ಚಟುವಟಿಕೆಗಳತ್ತ ಆಕರ್ಷಿಸುವುದರ ಜತೆಗೆ ಜಾನಪದ ಸಂಸ್ಕೃತಿಯ ಜೀವಂತಿಕೆಯನ್ನು ಕಾಪಾಡಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಗಾಯಕ ಶರಣಪ್ಪ ಗೋನಾಳ ಮಾತನಾಡಿ, ಯುವಜನರು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಯುವಜನೋತ್ಸವದಂತಹ ವೇದಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಅವಕಾಶ ಒದಗಿಸುತ್ತವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಪ್ರಕಾಶ ನಂದಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದಲ್ಲೊಂದು ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಮತ್ತು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಹೊರತರುವಲ್ಲಿ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವುದೇ ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಬೇಕು. ನಿರಂತರ ಪ್ರಯತ್ನ ಮತ್ತು ಅಭ್ಯಾಸದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ ಮಾತನಾಡಿ, ರಾಯಚೂರು ಜಿಲ್ಲೆಯ ಯುವ ಪ್ರತಿಭೆಗಳು ಜಿಲ್ಲಾಮಟ್ಟದ ಯುವಜನೋತ್ಸವವನ್ನು ಸದುಪಯೋಗಪಡಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು. ಪ್ರತಿಭಾವಂತ ಯುವಜನರಿಗೆ ಇಲಾಖೆಯಿಂದ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.

ಯುವಜನೋತ್ಸವದ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳು ಹಾಗೂ ಯುವಕ ಸಂಘಗಳ ಸ್ಪರ್ಧಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಜನಪದ ನೃತ್ಯ ತಂಡ ಸ್ಪರ್ಧೆಯಲ್ಲಿ ಸಿಂಧನೂರಿನ ವಿನೋದ್ ಮತ್ತು ತಂಡ ಪ್ರಥಮ ಸ್ಥಾನ ಪಡೆದರೆ, ರಾಯಚೂರಿನ ಟಾಗೋರ್ ಕಾಲೇಜು ದ್ವಿತೀಯ ಸ್ಥಾನ ಗಳಿಸಿತು.

ಜನಪದ ಗೀತೆ ತಂಡ ಸ್ಪರ್ಧೆಯಲ್ಲಿ ದೇವಸುಗೂರಿನ ಸೂಗೂರೇಶ್ವರ ಯುವಕ ಮಂಡಳಿ ಪ್ರಥಮ ಸ್ಥಾನ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕಲಾಶ್ರೀ ಮತ್ತು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವೈಯಕ್ತಿಕ ಚಿತ್ರಕಲೆ ಸ್ಪರ್ಧೆಯಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆನಂದ ಸದಾಶಿವ ಪ್ರಥಮ, ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಸುಮಯ್ಯ ದ್ವಿತೀಯ ಹಾಗೂ ಸೇವಾ ಕಾಲೇಜಿನ ಮಂಜುಳಾ ತೃತೀಯ ಸ್ಥಾನ ಗಳಿಸಿದರು.

ಕವಿತೆ ರಚನೆ ಸ್ಪರ್ಧೆಯಲ್ಲಿ ದೀಪಾ ಎ. ಶಿಂಧೆ ಪ್ರಥಮ, ಪ್ರಿಯಾಂಕ ಕರಿಯಪ್ಪ ಕುದರಿ ದ್ವಿತೀಯ ಹಾಗೂ ಉಮೇಶ ಎಂ. ಜಗಲ್ ತೃತೀಯ ಸ್ಥಾನ ಪಡೆದರು.

ಬೀದಿ ನಾಟಕ ಸ್ಪರ್ಧೆಯಲ್ಲಿ ರಾಯಚೂರಿನ ಎಸ್‌ಎಸ್‌ಎಂ ಪದವಿ ಕಾಲೇಜು (ಟಾಗೋರ್) ಪ್ರಥಮ ಸ್ಥಾನ ಹಾಗೂ ವೇದಾಂತ ಪದವಿ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಕಲಾವಿದರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ ನಾಯಕ ಬಹುಮಾನ ವಿತರಿಸಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ವೇದಾಂತ ಪದವಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ರಾಕೇಶ ರಾಜಲಬಂಡಿ, ಪ್ರಾಂಶುಪಾಲ ತಿಮ್ಮಯ್ಯಶೆಟ್ಟಿ ಇಲ್ಲೂರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಕಲಾವಿದರು ಹಾಗೂ ಯುವಜನರು ಉಪಸ್ಥಿತರಿದ್ದರು.