ರಾಯಚೂರು: ಸ್ಲಂ ನಿವಾಸಿಗಳ ಮೂಲಭೂತ ಸೌಲಭ್ಯಗಳು, ವಸತಿ ಹಕ್ಕು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಘಟಿತ ಹೋರಾಟ ನಡೆಸುವುದು ಅಗತ್ಯವಾಗಿದೆ. ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯು ಕಳೆದ ಎರಡು ದಶಕಗಳಿಂದ ನಿರಂತರ ಜನಪರ ಹೋರಾಟಗಳ ಮೂಲಕ ಹಲವು ಸಾಧನೆಗಳನ್ನು ಮಾಡಿದೆ ಎಂದು ಕೆ.ಪಿ. ಅನಿಲ್ ಕುಮಾರ್ ಶ್ಲಾಘಿಸಿದರು.

ನಗರದ ಜೆಸಿ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಹಾಗೂ ಸ್ಲಂ ನಿವಾಸಿಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಯಚೂರು ಜಿಲ್ಲಾ ಸಮಿತಿ ಮತ್ತು ಬೆಂಗಳೂರು ನಗರ ಸಮಿತಿಯ ಜಂಟಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 20 ವರ್ಷಗಳಿಂದ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯು ಸಭೆ, ಸಮಾವೇಶ ಹಾಗೂ ವಿವಿಧ ಜನಪರ ಹೋರಾಟಗಳನ್ನು ಸಂಘಟಿಸುವ ಮೂಲಕ ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ. ನಿರಂತರ ಹೋರಾಟ ಮತ್ತು ಸಂಘಟಿತ ಪ್ರಯತ್ನಗಳಿಂದ ಹಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಚಂದ್ರಮ್ಮ ಮಾತನಾಡಿ, ಸ್ಲಂ ನಿವಾಸಿಗಳ ಹಕ್ಕುಗಳ ರಕ್ಷಣೆ ಹಾಗೂ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಿಯಾ ವೇದಿಕೆಯು ನಿರಂತರವಾಗಿ ಧ್ವನಿ ಎತ್ತುತ್ತಿದೆ. ಬಡವರು ಮತ್ತು ವಸತಿರಹಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಂಘಟನೆಯ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಅಧ್ಯಕ್ಷ ಜನಾರ್ಧನ್ ಹಳ್ಳಿಬೆಂಚಿ ಮಾತನಾಡಿ, ಸಂಘಟನೆಯಲ್ಲಿ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶ ನೀಡದೆ ಸಮಾನತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ಶಾಖಾ ಹಾಗೂ ಜಿಲ್ಲಾ ಮಟ್ಟದಲ್ಲಿ ನಿರಂತರ ಸಭೆಗಳನ್ನು ನಡೆಸುವುದು, ಸದಸ್ಯರೊಂದಿಗೆ ಸಮಾಲೋಚನೆ ಮಾಡುವುದು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂವಾದ ನಡೆಸುವುದರಿಂದ ಸಂಘಟನೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಸ್ಲಂ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯ ಎಲ್ಲ ಹಂತಗಳ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಜನರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದರ ಜತೆಗೆ ಅವುಗಳ ಈಡೇರಿಕೆಗೆ ನಿರಂತರ ಪ್ರಯತ್ನ ನಡೆಸುವುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಬೆಂಗಳೂರು ನಗರ ಹಾಗೂ ರಾಯಚೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪರಸ್ಪರ ಪರಿಚಯಿಸಿಕೊಂಡು ಸಂಘಟನೆಯ ಕಾರ್ಯಚಟುವಟಿಕೆಗಳು, ಸ್ಲಂ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮುಂದಿನ ಹೋರಾಟಗಳ ಕುರಿತು ಸಮಾಲೋಚನೆ ನಡೆಸಿದರು.

ಸಭೆಯ ಬಳಿಕ ಉಭಯ ಸಮಿತಿಗಳ ಪದಾಧಿಕಾರಿಗಳು ನಗರದ ಪದ್ಮಾವತಿ ಕಾಲೋನಿ, ಪೋತಗಲ್ ಸ್ಲಂ, ಅಮರಾವತಿ ಕಾಲೋನಿ, ಜ್ಯೋತಿ ಕಾಲೋನಿ ಸೇರಿದಂತೆ ವಿವಿಧ ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿಯನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ನಿವೇಶನರಹಿತರಿಗೆ ಮಂಜೂರಾಗಿರುವ ಭೂಮಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ಖಜಾಂಚಿ ತೇಜಸ್ ಕುಮಾರ್, ಬೆಂಗಳೂರು ನಗರ ಸಮಿತಿ ಅಧ್ಯಕ್ಷ ಮಂಜುಭಾಯಿ, ಯುವ ಘಟಕದ ಅಧ್ಯಕ್ಷ ಹನುಮಂತು ಕಟ್ಟಿಮನಿ, ಬಸವರಾಜ ಹೊಸೂರು, ನೂರ್‌ಜಹಾನ್, ಮಹೇಶ್, ಶರಣು ಬಸವ, ರಾಜಶೇಖರ್ ಯಾಕ್ಲಾಸಪುರ, ಡೊಕ್ಕ ಜಂಬಣ್ಣ, ಜಂಬಣ್ಣ, ರಾಮಣ್ಣ, ಎಸ್. ನಾಗರಾಜ್, ನಿತಿನ್, ಪವನ್, ಅಂಜಿ, ಜಿಂದು, ತಾಯಪ್ಪ, ಶಂಕ್ರಮ್ಮ, ಪುಷ್ಪ, ಶೈನಜ ಬೇಗಂ, ಚಂದ್ರು, ಪ್ರವೀಣ್, ಶೇಖರ್, ಅರುಣ್ ಸೇರಿದಂತೆ ಬೆಂಗಳೂರು ಹಾಗೂ ರಾಯಚೂರು ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.