ರಾಯಚೂರು, ಅ.29: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಡಾ. ಗುರುರಾಜ ಸುಂಕದ ಅವರನ್ನು ನೇಮಕ ಮಾಡಲಾಗಿದ್ದು, ಅಕ್ಟೋಬರ್ 28ರಂದು ಅವರು ಅಧಿಕಾರ ಸ್ವೀಕರಿಸಿದರು.
ಕರ್ನಾಟಕದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಡಾ. ಗುರುರಾಜ ಸುಂಕದ ಅವರನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಅವರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದವರಾದ ಡಾ. ಗುರುರಾಜ ಸುಂಕದ ಅವರು ರಾಯಚೂರು ಕೃಷಿ ಮಹಾವಿದ್ಯಾಲಯದ ಪ್ರಥಮ ಬ್ಯಾಚ್ನ ಬಿ.ಎಸ್ಸಿ. (ಕೃಷಿ) ವಿದ್ಯಾರ್ಥಿಯಾಗಿದ್ದರು. ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಲ್ಲಿಯೇ ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿ ಇದೀಗ ಪ್ರಭಾರ ಕುಲಪತಿ ಹುದ್ದೆಗೇರಿರುವುದು ವಿಶೇಷವಾಗಿದೆ.
ಸುಮಾರು 28 ವರ್ಷಗಳ ಸುದೀರ್ಘ ಸೇವಾನುಭವ ಹೊಂದಿರುವ ಅವರು, ವಿಶ್ವವಿದ್ಯಾಲಯದ ಸಸ್ಯರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಸಹ ಸಂಶೋಧನಾ ನಿರ್ದೇಶಕರಾಗಿ, ಸ್ನಾತಕೋತ್ತರ ವಿಭಾಗದ ಡೀನ್ ಆಗಿ ಹಾಗೂ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಪ್ರಭಾರ ಕುಲಪತಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳ ಜತೆಗೆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಅವರು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಶ್ವವಿದ್ಯಾಲಯದ ಆಡಳಿತದಲ್ಲಿ ಹೊಂದಿರುವ ದೀರ್ಘ ಅನುಭವವು ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೃಷಿ ಸಂಶೋಧನೆಗಳಿಗೆ ಆದ್ಯತೆ ನೀಡುವುದು, ಕೃಷಿ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನಾ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅವರ ಅನುಭವ ಪ್ರಯೋಜನಕಾರಿಯಾಗಲಿದೆ ಎಂಬ ಆಶಯವನ್ನು ಈ ಭಾಗದ ಜನತೆ ವ್ಯಕ್ತಪಡಿಸಿದ್ದಾರೆ.



