ಅಯ್ಯೋ! ಆ ದೇವರಿಗೆ ಕಣ್ಣಿಲ್ಲವೇ? ಕಣ್ಣಿದ್ದರೆ ಹೀಗೆಲ್ಲ ಆಗುವುದನ್ನು ನೋಡಿಕೊಂಡು ಸುಮ್ಮನೆ ಇರುತ್ತಿದ್ದನೇ?

ದೇವರೇ ಇಲ್ಲ ರೀ... ನಾವು ಸುಮ್ಮನೆ ದೇವರು ಕಾಯುತ್ತಾನೆ ಎಂದು ಹೇಳುತ್ತೇವೆ. ನಿಜವಾಗಿಯೂ ಅವನು ಇದ್ದರೆ ಇಷ್ಟೆಲ್ಲ ಪಾಪಕರ್ಮಗಳು ಯಾಕೆ ಹೆಚ್ಚಾಗುತ್ತಿದ್ದವು ಹೇಳಿ?

ಹೀಗೆಲ್ಲ ಜನರು ಗೋಳಾಡುವುದನ್ನು ನಾವು ನೋಡುತ್ತೇವೆ. ಯಾರ ಮನೆಯಲ್ಲಾದರೂ ಅಕಾಲಿಕ ಮರಣ ಸಂಭವಿಸಿದಾಗ, ಚಿಕ್ಕ ವಯಸ್ಸಿನ ವ್ಯಕ್ತಿಗಳು, ಮಕ್ಕಳು, ಮಹಿಳೆಯರು ತೀರಿಕೊಂಡಾಗ ಅಥವಾ ಅಪಘಾತದಿಂದ ತೊಂದರೆ ಉಂಟಾದಾಗ ಆ ಕುಟುಂಬದವರು ಮಾತ್ರವಲ್ಲದೆ, ಅವರ ಹತ್ತಿರದ ಸ್ನೇಹಿತರು, ಸಂಬಂಧಿಕರು ಹಾಗೂ ಒಡನಾಡಿಗಳು ಇಂತಹ ಮಾತುಗಳನ್ನು ಆಡುವುದನ್ನು ನಾವು ನೋಡಿಯೇ ಇರುತ್ತೇವೆ.

ಆದರೆ ನಿಜ ಹೇಳಬೇಕೆಂದರೆ, ಕರ್ಮದ ಬಂಧನದಿಂದ ನಾವು ಬಿಡಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ.

ನಮ್ಮ ಬದುಕು ಒಂದು ಪಾಠಶಾಲೆಯಿದ್ದಂತೆ. ಇಲ್ಲಿ ಆ ದೇವರು ನಮಗೆ ಬುದ್ಧಿ, ವಿವೇಕ, ಸಮಯ ಹಾಗೂ ಶಕ್ತಿಯನ್ನು ದಯಪಾಲಿಸುತ್ತಾನೆ. ತಂದೆ, ತಾಯಿ, ಗುರುಗಳು, ಸ್ನೇಹಿತರು, ಬಂಧುಬಾಂಧವರು, ಸಂಗಾತಿ ಹಾಗೂ ಮಕ್ಕಳು ಎಂಬ ಶಿಕ್ಷಕರನ್ನೂ ನೀಡುತ್ತಾನೆ. ಬದುಕಿನ ಪ್ರತಿದಿನವೂ ನಾವು ಒಂದೊಂದು ಹೊಸ ಪಾಠವನ್ನು ಕಲಿಯುತ್ತೇವೆ. ಆದರೆ ಬದುಕಿನಲ್ಲಿ ಎದುರಾಗುವ ಎಲ್ಲ ಪರೀಕ್ಷೆಗಳನ್ನೂ ನಾವೇ ಎದುರಿಸಬೇಕು.

ಇನ್ನೂ ಸರಳವಾಗಿ ಹೇಳಬೇಕೆಂದರೆ, ಪರೀಕ್ಷಾ ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿ ನಾವಾದರೆ, ನಮ್ಮ ಪರೀಕ್ಷಾ ಕೊಠಡಿಯ ಮೇಲ್ವಿಚಾರಕ ಆ ದೇವರಾಗಿರುತ್ತಾನೆ.

ಇಡೀ ಒಂದು ವರ್ಷ ನಾವು ಕಲಿತ ವಿದ್ಯೆಯನ್ನು ಮನನ ಮಾಡಿಕೊಂಡು ಪರೀಕ್ಷೆ ಬರೆಯುತ್ತಿರುವಾಗ ತಪ್ಪು ಉತ್ತರ ಬರೆಯಲಾರಂಭಿಸಿದರೆ, ಮೇಲ್ವಿಚಾರಕ ನಮ್ಮ ಕೈಯಲ್ಲಿರುವ ಉತ್ತರಪತ್ರಿಕೆ ಅಥವಾ ಪೆನ್ನನ್ನು ಕಸಿದುಕೊಳ್ಳುವುದಿಲ್ಲ. ನೀನು ತಪ್ಪು ಉತ್ತರ ಬರೆಯುತ್ತಿದ್ದೀಯ ಎಂದು ತಿಳಿಹೇಳುವುದಿಲ್ಲ.

ಏಕೆಂದರೆ, ಈಗಾಗಲೇ ವರ್ಷಪೂರ್ತಿ ಆತ ವಿವಿಧ ರೂಪಗಳಲ್ಲಿ ನಮಗೆ ಪಾಠ ಕಲಿಸಿರುತ್ತಾನೆ. ಪರೀಕ್ಷೆಯ ಸಮಯದಲ್ಲಿ ಏನನ್ನು ಬರೆಯಬೇಕು, ಎಷ್ಟು ಬರೆಯಬೇಕು, ಹೇಗೆ ಬರೆಯಬೇಕು ಎಂಬುದು ನಮ್ಮ ಕೈಯಲ್ಲಿರುತ್ತದೆ. ಅದು ನಮ್ಮ ವೈಯಕ್ತಿಕ ನಿರ್ಧಾರವಾಗಿರುತ್ತದೆ.

ಆ ಸಮಯದಲ್ಲಿ ನಮ್ಮದೇ ಆದ ಸ್ವತಂತ್ರ ಆಲೋಚನೆ, ಜ್ಞಾನ ಹಾಗೂ ಬುದ್ಧಿಯನ್ನು ಬಳಸಿಕೊಂಡು ನಾವು ಬದುಕಿನ ಪರೀಕ್ಷೆಯನ್ನು ಬರೆದು, ನಂತರ ಅದರ ಫಲಿತಾಂಶಕ್ಕೆ ದೇವರನ್ನು ಹೊಣೆ ಮಾಡುವುದು ಅದೆಷ್ಟರ ಮಟ್ಟಿಗೆ ಸರಿಯಾಗುತ್ತದೆ? ನೀವೇ ಹೇಳಿ!

ಇದನ್ನೇ ನಮ್ಮ ಬದುಕಿಗೆ ಅಳವಡಿಸಿಕೊಂಡಾಗ, ದೇವರು ಅಥವಾ ನಮ್ಮ ಬದುಕು ನಮಗೆ ಹಲವಾರು ವಿಧದ ಪಾಠಗಳನ್ನು ಕಲಿಸಿರುತ್ತದೆ. ತಪ್ಪಿದಾಗ ತಿದ್ದಿ ಬುದ್ಧಿ ಹೇಳಿರುತ್ತದೆ ಎಂಬುದು ಅರ್ಥವಾಗುತ್ತದೆ.

ಕೇವಲ ಅನಿರೀಕ್ಷಿತ ಆಘಾತಗಳು ಉಂಟಾದಾಗ, ತೊಂದರೆ ಎದುರಾದಾಗ ದೇವರನ್ನು ಹೊಣೆ ಮಾಡುವ ನಾವು, ಸುಖದ ಸಮಯದಲ್ಲಿ ಅಥವಾ ನಮ್ಮ ಬದುಕಿನಲ್ಲಿ ಒಳ್ಳೆಯ ಸಂಗತಿಗಳು ಘಟಿಸಿದಾಗ ಮಾತ್ರ ವಿಭಿನ್ನವಾಗಿ ವರ್ತಿಸುತ್ತೇವೆ.

ಕೆಲವರು ಮಾತ್ರ ಎಲ್ಲವೂ ಆ ದೇವರ ಕೃಪೆ ಎಂದು ಹೇಳುತ್ತಾರೆ. ಆದರೆ ಬಹುತೇಕ ಜನರು ಇದೆಲ್ಲವೂ ನನ್ನ ವೈಯಕ್ತಿಕ ಸಾಧನೆಯ ಫಲ ಎಂದು ಹೇಳಿಕೊಳ್ಳುತ್ತಾರೆ. ಅಲ್ಲವೇ ಸ್ನೇಹಿತರೇ?

ಒಂದೊಮ್ಮೆ ಮನುಷ್ಯ ತಪ್ಪು ದಾರಿಗೆ ಇಳಿಯುತ್ತಿರುವಾಗ ತಾನು ಮಾಡುತ್ತಿರುವುದು ತಪ್ಪು ಎಂದು ಆತನಿಗೆ ಅನಿಸುವುದೇ ಇಲ್ಲ. ಇದು ಒಂದು ಹಂತವಾದರೆ, ಮತ್ತೊಂದು ಹಂತದಲ್ಲಿ ಆತ ತನ್ನ ತಪ್ಪುಗಳಿಗೆ ಸಮರ್ಥನೆಯನ್ನು ಹುಡುಕುತ್ತಾನೆ.

‘ಎಲ್ಲರೂ ಮಾಡುತ್ತಿದ್ದಾರೆ, ನಾನೇಕೆ ಮಾಡಬಾರದು?’ ಎಂಬ ತನ್ನ ಸಮರ್ಥನೆಯನ್ನು ಇತರರೂ ಒಪ್ಪಿಕೊಳ್ಳಬೇಕೆಂದು ಆತ ಬಯಸುತ್ತಾನೆ.

ಆದರೆ ಸಂದಿಗ್ಧ ಪರಿಸ್ಥಿತಿ ಎದುರಾದಾಗ ಮಾತ್ರ ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ದೇವರನ್ನು ನೆನೆಯುತ್ತೇವೆ. ನಮ್ಮ ಬದುಕಿನಲ್ಲಿ ಕೆಟ್ಟ ಪರಿಸ್ಥಿತಿ ಎದುರಾದಾಗ ಅದೇ ದೇವರನ್ನು ಇನ್ನಿಲ್ಲದಂತೆ ಹೀಗಳೆಯುತ್ತೇವೆ.

ಮನುಷ್ಯನಲ್ಲಿ ನೆಲೆಸಿರುವ ಇಂತಹ ವೈರುಧ್ಯದ ಭಾವನೆಗೆ ಏನೆನ್ನಬೇಕು?

ನೀವೇ ಹೇಳಿ!

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ