ರಾಯಚೂರು, ನ.1: ಕರ್ನಾಟಕವು ಶ್ರೀಮಂತ ಇತಿಹಾಸ, ಸಾಹಿತ್ಯ, ಕಲೆ ಹಾಗೂ ವೈವಿಧ್ಯಮಯ ಜಾನಪದ ಸಂಸ್ಕೃತಿಯನ್ನು ಹೊಂದಿರುವ ನಾಡಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಯುವ ಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಚನ್ನಬಸಮ್ಮ ಎಂ. ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಹೇಳಿದರು.

ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಸಂಚಾಲಿತ ಚನ್ನಬಸಮ್ಮ ಎಂ. ನಾಗಪ್ಪ (ಸಿ.ಎಂ.ಎನ್.) ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಗೌರವವನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು. ಕನ್ನಡದಲ್ಲಿ ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಮುಂದಿನ ಪೀಳಿಗೆಗೆ ಭಾಷೆಯ ಮಹತ್ವವನ್ನು ತಿಳಿಸಿಕೊಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯಾನಂತರ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು, ಬಾಂಬೆ, ಹೈದರಾಬಾದ್, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಸೇರಿದಂತೆ ವಿವಿಧ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದವು. ಕನ್ನಡಿಗರ ಏಕೀಕರಣಕ್ಕಾಗಿ ದಶಕಗಳ ಕಾಲ ನಡೆದ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು. ಬಳಿಕ 1973ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ‘ಕರ್ನಾಟಕ ಗತವೈಭವ’ ಕೃತಿಯು ಕನ್ನಡಿಗರಲ್ಲಿ ನಾಡು-ನುಡಿಯ ಅಭಿಮಾನ ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಸ್ಮರಿಸಿದರು.

ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಾಡಿನ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಪಂಪ, ರನ್ನ, ಕುಮಾರವ್ಯಾಸ, ಬಸವಣ್ಣ, ಕನಕದಾಸರಿಂದ ಹಿಡಿದು ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರರವರೆಗೆ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕವು ಯಕ್ಷಗಾನ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಸೇರಿದಂತೆ ಅನೇಕ ವಿಶಿಷ್ಟ ಜಾನಪದ ಕಲಾಪ್ರಕಾರಗಳ ತವರೂರಾಗಿದೆ. ಈ ಕಲೆಗಳು ನಾಡಿನ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕಗಳಾಗಿದ್ದು, ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು. ವಿದ್ಯಾರ್ಥಿನಿಯರು ಕನ್ನಡ ಸಾಹಿತ್ಯದ ಅಧ್ಯಯನದೊಂದಿಗೆ ನಾಡಿನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಕುರಿತು ಅರಿವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಕಾಲೇಜಿನ ವಿದ್ಯಾರ್ಥಿನಿಯರು ಕನ್ನಡಾಂಭೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ವಿಶೇಷ ಪೂಜೆ ನೆರವೇರಿಸಿದರು. ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪುಷ್ಪಾರ್ಚನೆ ಸಲ್ಲಿಸಿ ಕನ್ನಡಾಂಭೆಗೆ ಜಯಘೋಷ ಮೊಳಗಿಸುವ ಮೂಲಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಲ್ಮಾ ಭಾನು, ರೇಣುಕಾ, ಶಿವಲೀಲಾ, ರಾಘಮ್ಮ, ಅನ್ನಪೂರ್ಣ, ವಿದ್ಯಾಶ್ರೀ, ಗೋವಿಂದರಾಜ್ ಎನ್., ಮಹೇಶ, ಚಿನ್ನಪ್ಪ ಭೀಮಣ್ಣ ಭಂಡಾರಿ ಹಾಗೂ ಬೋಧಕೇತರ ಸಿಬ್ಬಂದಿಯಾದ ಸಂಗಯ್ಯ ಸ್ವಾಮಿ, ರೋಹಿತ್, ಲಲಿತಮ್ಮ, ಭಾಗ್ಯಮ್ಮ ಸೇರಿದಂತೆ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.