ರಾಯಚೂರು, ನ.1: ಕನ್ನಡ ಭಾಷೆಯು ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದ್ದು, ನಾಡಿನ ಇತಿಹಾಸ, ಸಾಹಿತ್ಯ, ಕಲೆ ಮತ್ತು ಪರಂಪರೆಯ ಪ್ರತೀಕವಾಗಿದೆ. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಬಿ. ವಿಜಯ ರಾಜೇಂದ್ರ ಹೇಳಿದರು.
ನಗರದ ರಾಂಪುರದಲ್ಲಿರುವ ಡಾ. ನರಸಿಂಹಲು ನಂದಿನಿ ಸ್ಮಾರಕ ಶಿಕ್ಷಣ ಸಂಸ್ಥೆಯ ಸಂಚಾಲಿತ ನಂದಿನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ನಂದಿನಿ ಶಿಕ್ಷಣ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣದ ಇತಿಹಾಸವನ್ನು ವಿವರಿಸಿದ ಅವರು, ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ದೀರ್ಘ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಬಳಿಕ 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ಐತಿಹಾಸಿಕ ಸಾಧನೆಯ ಹಿಂದೆ ಅನೇಕ ಸಾಹಿತಿಗಳು, ಚಿಂತಕರು ಹಾಗೂ ಹೋರಾಟಗಾರರ ಪರಿಶ್ರಮವಿದೆ ಎಂದು ಸ್ಮರಿಸಿದರು.
ಕರ್ನಾಟಕವು ಪ್ರಾಚೀನ ಕಾಲದಿಂದಲೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಮೌರ್ಯರು, ಶಾತವಾಹನರು, ಗಂಗರು, ಕದಂಬರು, ಚಾಲುಕ್ಯರು ಹಾಗೂ ವಿಜಯನಗರ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಮಹತ್ವದ ಕೊಡುಗೆಗಳು ದೊರೆತಿವೆ. ಕನ್ನಡ ಸಾಹಿತ್ಯಕ್ಕೆ ಲಭಿಸಿರುವ ಜ್ಞಾನಪೀಠ ಪ್ರಶಸ್ತಿಗಳು ಭಾಷೆಯ ಸಾಹಿತ್ಯಿಕ ಹಿರಿಮೆಯನ್ನು ಸಾರುತ್ತವೆ. ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಹುಯಿಲಗೋಳ ನಾರಾಯಣರಾಯರು, ಎಸ್. ನಿಜಲಿಂಗಪ್ಪ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ಅನೇಕ ಮಹನೀಯರ ಸೇವೆಯನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಲಿಸ್ ಇ. ಜೋಸೆಫ್ ಮಾತನಾಡಿ, ಕನ್ನಡವು ಕೇವಲ ಸಂವಹನದ ಭಾಷೆಯಲ್ಲ. ಅದು ನಮ್ಮ ಬದುಕಿನ ಭಾವನೆ, ಸಂಸ್ಕೃತಿ ಮತ್ತು ಸಂಬಂಧಗಳನ್ನು ಬೆಸೆಯುವ ಶಕ್ತಿಯಾಗಿದೆ. ತಾಯಿಯ ಮೊದಲ ನುಡಿಯಿಂದ ಆರಂಭವಾಗಿ ಬಾಲ್ಯದ ನೆನಪುಗಳು, ಹಬ್ಬಗಳು, ಜಾನಪದ ಹಾಡುಗಳು ಹಾಗೂ ದೈನಂದಿನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಕನ್ನಡ ಹಾಸುಹೊಕ್ಕಾಗಿದೆ ಎಂದು ಹೇಳಿದರು.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ವಿಶಿಷ್ಟ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಪಂಪ, ರನ್ನ, ಪೊನ್ನ, ಬಸವಣ್ಣ, ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು, ಕುವೆಂಪು, ದ.ರಾ. ಬೇಂದ್ರೆ ಹಾಗೂ ಶಿವರಾಮ ಕಾರಂತ ಸೇರಿದಂತೆ ಅನೇಕ ಮಹನೀಯರು ತಮ್ಮ ಸಾಹಿತ್ಯ ಮತ್ತು ಚಿಂತನೆಗಳ ಮೂಲಕ ಕನ್ನಡದ ಹಿರಿಮೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದರು.
ಕರ್ನಾಟಕವೆಂದರೆ ಕೇವಲ ಭೌಗೋಳಿಕ ಗಡಿಗಳಿಂದ ಗುರುತಿಸಲ್ಪಡುವ ರಾಜ್ಯವಲ್ಲ. ಅದು ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಮಾನವೀಯ ಮೌಲ್ಯಗಳ ಸಂಗಮವಾಗಿದೆ. ಇತರ ಭಾಷೆಗಳನ್ನು ಗೌರವಿಸುವುದರ ಜೊತೆಗೆ ಮಾತೃಭಾಷೆಯಾದ ಕನ್ನಡವನ್ನು ಪ್ರೀತಿಸಿ, ದೈನಂದಿನ ಬದುಕಿನಲ್ಲಿ ಬಳಸುವ ಮೂಲಕ ಅದರ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ರಾಷ್ಟ್ರಕವಿ ಕುವೆಂಪು ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಆಶಯವನ್ನು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ರಾಜೇಶ್ವರಿ ಸ್ವಾಗತಿಸಿದರು. ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನರಸಿಂಹ ಹೊಸೂರ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನ ವಂದನಾರ್ಪಣೆ ಸಲ್ಲಿಸಿದರು.
ನಂದಿನಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ನಂದಿನಿ ಶಿಕ್ಷಣ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.



