ರಾಯಚೂರು: ನವರತ್ನ ಯುವಕ ಸಂಘದ ವತಿಯಿಂದ ಹರಿಜನವಾಡದ ಸಮುದಾಯ ಭವನದ ಆವರಣದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ಧ್ವಜಾರೋಹಣ, ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ, ಸಾಧಕರ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು.
ಬೆಳಗ್ಗೆ 9 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ. ಬೂದೆಪ್ಪ ಹಾಗೂ ಈರಣ್ಣ ಭಂಡಾರಿ ಅವರು ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಗರಸಭೆಯ ಮಾಜಿ ಸದಸ್ಯ ಪಿ. ಯಲ್ಲಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನವರತ್ನ ಯುವಕ ಸಂಘವು ಕಳೆದ 25 ವರ್ಷಗಳಿಂದ ಹರಿಜನವಾಡ ಬಡಾವಣೆಯಲ್ಲಿ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮೂಲಕ ಭಾಷಾ ಸಾಮರಸ್ಯಕ್ಕೆ ಸಂಘವು ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಶಿಕ್ಷಕ ಪಿ. ಚಂದ್ರಶೇಖರ್ ಮಾತನಾಡಿ, ಕರ್ನಾಟಕವು ಪ್ರಾಚೀನ ಇತಿಹಾಸ, ಶ್ರೀಮಂತ ಸಾಹಿತ್ಯ, ಕಲೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ನಾಡಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರು ಮಹತ್ವದ ಹೋರಾಟ ನಡೆಸಿದರು. 1905ರಿಂದ ಕರ್ನಾಟಕ ಏಕೀಕರಣದ ಪರವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು ನೀಡಿದರು ಎಂದು ಸ್ಮರಿಸಿದರು.
1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಯೊಬ್ಬ ಕನ್ನಡಿಗರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ಮೈಸೂರಿನ ಒಡೆಯರು ಸೇರಿದಂತೆ ಹಲವು ರಾಜಮನೆತನಗಳು ಕರ್ನಾಟಕದ ಇತಿಹಾಸ, ಆಡಳಿತ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಇಂತಹ ಸಮೃದ್ಧ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹರಿಜನವಾಡ ಬಡಾವಣೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಗಾಜಗಾರಪೇಟೆ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಜೆ. ರಾಮುಲು, ಎ. ರಾಮುಲು, ಪಿ. ಚಂದ್ರಶೇಖರ್, ಎಚ್. ಪದ್ಮ, ಜೆ. ಅಂಜನ್ ಕುಮಾರ್, ಎಸ್. ರಾಜು, ತಮೇಶ್, ಅಂಗನವಾಡಿ ಕಾರ್ಯಕರ್ತೆಯರಾದ ಗೋಕ್ರಮ್ಮ, ನಿರ್ಮಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನವರತ್ನ ಯುವಕ ಸಂಘದ ಗೌರವಾಧ್ಯಕ್ಷ ಜನಾರ್ದನ್ ಹಳ್ಳಿಬೆಂಚಿ, ಅಧ್ಯಕ್ಷ ವೀರೇಶ್, ಉಪಾಧ್ಯಕ್ಷ ಎಸ್. ನಾಗರಾಜ್, ಕಾರ್ಯದರ್ಶಿ ಪಿ. ಮಾರುತಿ, ಸಹ ಕಾರ್ಯದರ್ಶಿ ಪವನ್ ಕುಮಾರ್, ಖಜಾಂಚಿ ಶರಣಪ್ಪ, ಕೆ.ಪಿ. ಅನಿಲ್ ಕುಮಾರ್, ಆರ್. ಆಂಜನೇಯ, ಎಸ್. ವೆಂಕಟೇಶ್, ಕುಮಾರ್, ನಿತಿನ್, ಉದಯ್, ಎಚ್ಡಿಎಫ್ಸಿ ನಾಗರಾಜ್, ಎಂ.ಪಿ. ಶಿವಪ್ಪ, ಸಿ.ಎಂ. ಗೋವಿಂದ, ಎಲ್ಐಸಿ ಈರಣ್ಣ ಸೇರಿದಂತೆ ಬಡಾವಣೆಯ ನೂರಾರು ನಿವಾಸಿಗಳು ಉಪಸ್ಥಿತರಿದ್ದರು.



