ರಾಯಚೂರು, ನ.2: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಕಚೇರಿಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್ ಕರೆ ನೀಡಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ 2026–27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ನವೆಂಬರ್ 2ರಂದು ಬಹೇರೂನ್‌ಖಿಲ್ಲಾ ಪ್ರದೇಶದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಭ್ರಷ್ಟಾಚಾರ ಬಹುದೊಡ್ಡ ಅಡ್ಡಿಯಾಗಿದ್ದು, ಅದನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ಸಂಸ್ಥೆಯ ಕಾರ್ಯವೈಖರಿಯ ಕುರಿತು ಶಿಬಿರಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಮಹಮ್ಮದ್ ಗೌಸ್, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ ನಿರ್ವಹಿಸಿದಾಗ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕ ಸೇವೆಯಲ್ಲಿ ನಿಷ್ಠೆ ಮತ್ತು ಜವಾಬ್ದಾರಿಯುತ ನಡೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರವೀಂದ್ರ ಎಸ್. ಬಂಡಿ ಮಾತನಾಡಿ, ವಿದ್ಯಾರ್ಥಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು. ಭ್ರಷ್ಟಾಚಾರ, ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸ್ವಚ್ಛ ಹಾಗೂ ಆದರ್ಶ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಮಹಿಬೂಬ್ ಸಾಬ್ ಮಾತನಾಡಿ, ಭ್ರಷ್ಟಾಚಾರದಿಂದ ಸಾಮಾಜಿಕ ಜೀವನದ ಮೌಲ್ಯಗಳು ಕುಸಿಯುತ್ತಿದ್ದು, ಸಮಾಜದಲ್ಲಿ ನೈತಿಕತೆ ಮತ್ತು ವೈಚಾರಿಕ ಚಿಂತನೆ ಬೆಳೆಸುವುದು ಇಂದಿನ ಅಗತ್ಯವಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಭ್ರಷ್ಟಾಚಾರ ವಿರೋಧಿ ಜಾಗೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಉಪನ್ಯಾಸಕಿ ರೂತ್ ನಳಿನಿ ಎನ್‌ಎಸ್‌ಎಸ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗೋವರ್ಧನ್ ರೆಡ್ಡಿ, ವೆಂಕನಗೌಡ, ಮಹಮ್ಮದ್ ಖಾಜಾ, ಭಾನುಪ್ರಿಯಾ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.

ಶಿಬಿರಾರ್ಥಿ ಪ್ರಜ್ವಲ್ ಪ್ರಾರ್ಥಿಸಿದರು. ಕುವೆಂಪು ತಂಡದ ನಾಯಕ ವಿವೇಕ್ ಎನ್‌ಎಸ್‌ಎಸ್ ಗೀತೆ ಹಾಡಿ ಸ್ವಾಗತಿಸಿದರು. ಶಿಬಿರಾರ್ಥಿ ಪ್ರಶಾಂತ್ ವಂದಿಸಿದರು.