ರಾಯಚೂರು: ನಗರದ ಹರಿಜನವಾಡ ಬಡಾವಣೆಯ ಬಾಂಬೆ ಕಂಪನಿ ವೃತ್ತದಲ್ಲಿ ಡಾ. ಪುನೀತ್ ರಾಜ್ಕುಮಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಆಟೋ ಚಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಸತತ ಆರನೇ ವರ್ಷವೂ ಅದ್ಧೂರಿಯಾಗಿ ಆಚರಿಸಲಾಯಿತು.
ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡಾವಣೆಯ ಹಿರಿಯ ಮುಖಂಡರು, ಗಣ್ಯರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ರಾಜ್ಯೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಹರಿಜನವಾಡ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ಅಲ್ಲದೆ, ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಳೆದ ಆರು ವರ್ಷಗಳಿಂದ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಡಾ. ಪುನೀತ್ ರಾಜ್ಕುಮಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಆಟೋ ಚಾಲಕರ ಸಂಘವು ಕನ್ನಡಾಭಿಮಾನ ಬೆಳೆಸುವುದರ ಜೊತೆಗೆ ಸಮಾಜದ ಶ್ರಮಜೀವಿಗಳು ಮತ್ತು ಬಡ ಕುಟುಂಬಗಳಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿಶೇಷವಾಗಿ ಸಮಾಜದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಸ್ಥಳೀಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವವು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ, ಪರಸ್ಪರ ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ವೇದಿಕೆಯಾಗಬೇಕು ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ದಿವಂಗತ ನಟ ಡಾ. ಪುನೀತ್ ರಾಜ್ಕುಮಾರ್ ಅವರ ಸಮಾಜಮುಖಿ ಸೇವಾ ಮನೋಭಾವವನ್ನು ಆದರ್ಶವಾಗಿಟ್ಟುಕೊಂಡು ಟ್ರಸ್ಟ್ ವತಿಯಿಂದ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ರೆಡ್ಡಿ ತಿಮ್ಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಈರಣ್ಣ ಭಂಡಾರಿ, ಗಣೇಶ ಪಾಳ್ಯದ ನ್ಯಾಯಬೆಲೆ ಅಂಗಡಿ ಮಾಲೀಕರು, ನಿವೃತ್ತ ಪೊಲೀಸ್ ಅಧಿಕಾರಿ ಮಹಾದೇವಪ್ಪ, ಆರ್. ಹನುಮಂತು (ಇನ್ಕೇಬಲ್), ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಆರ್. ಆಂಜನೇಯ, ಬಿಜೆಪಿ ಹಿರಿಯ ಮುಖಂಡ ಎನ್. ಶಂಕರ್, ಬಿಜಿನಿಗೇರಾ ಶಾಲೆಯ ಮುಖ್ಯಗುರು ನರಸಿಂಹಲು ಮಾಸ್ಟರ್, ಶಿಕ್ಷಕ ಟಿ. ಚಂದ್ರಶೇಖರ್, ಕಾಂಗ್ರೆಸ್ ಮುಖಂಡ ಆನಂದ್, ಮಲ್ಲೇಶ್, ಮಹಾನಗರ ಪಾಲಿಕೆಯ ನರಸಿಂಹಲು ಹಾಗೂ ಅಧ್ಯಕ್ಷ ನರಸಿಂಹ ನಾಯ್ಡು ಉಪಸ್ಥಿತರಿದ್ದರು.
ಅಲ್ಲದೆ, ಆಟೋ ಚಾಲಕರಾದ ಜಾನಿ, ವಿಜಯ್, ವೀರೇಶ್, ರಾಮು, ತಾಯಪ್ಪ, ಸತ್ಯಣ್ಣ, ಕೃಷ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು, ಬಡಾವಣೆಯ ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕನ್ನಡಾಭಿಮಾನ, ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವದೊಂದಿಗೆ ನಡೆದ ರಾಜ್ಯೋತ್ಸವ ಕಾರ್ಯಕ್ರಮವು ಬಡಾವಣೆಯ ಜನರಲ್ಲಿ ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂದೇಶ ಸಾರಿತು.



