ರಾಯಚೂರು: ಆನೆಕಾಲು ರೋಗದ ನಿಯಂತ್ರಣ ಹಾಗೂ ರೋಗಿಗಳ ಆರೋಗ್ಯ ರಕ್ಷಣೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದ್ದು, ರೋಗಪೀಡಿತರು ಕಾಲುಗಳ ಸ್ವಚ್ಛತೆ ಮತ್ತು ಸೂಕ್ತ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಬಿಡಿಟಿಎಸ್ ಮೇಲ್ವಿಚಾರಕಿ ಸಂಧ್ಯಾ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹೆಗಸನಹಳ್ಳಿ ಗ್ರಾಮದಲ್ಲಿ ಆನೆಕಾಲು ರೋಗಪೀಡಿತರಿಗಾಗಿ ಆಯೋಜಿಸಿದ್ದ ರೋಗ ನಿರ್ವಹಣೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆನೆಕಾಲು ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರೋಗ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡುವುದರ ಜೊತೆಗೆ, ಅವರ ಕಾಲುಗಳಿಗೆ ಸೂಕ್ತವಾದ ವಿಶೇಷ ಚಪ್ಪಲಿಗಳನ್ನು ಒದಗಿಸುವ ಉದ್ದೇಶದಿಂದ ಅಳತೆಗಳನ್ನು ಪಡೆಯಲಾಯಿತು. ರೋಗಪೀಡಿತರು ಪ್ರತಿದಿನ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಾಲುಗಳ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಸೋಂಕು ಉಂಟಾಗಿ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಆನೆಕಾಲು ರೋಗವು ಸೋಂಕಿತ ಕ್ಯೂಲೆಕ್ಸ್ ಸೊಳ್ಳೆಗಳ ಕಡಿತದಿಂದ ಹರಡುವ ಪರಾವಲಂಬಿ ಸೋಂಕಾಗಿದ್ದು, ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಹಲವು ವರ್ಷಗಳು ಬೇಕಾಗಬಹುದು. ಪದೇಪದೇ ಜ್ವರ ಬರುವುದು, ಮೈಕೈ ನೋವು, ಕಾಲುಗಳಲ್ಲಿ ಊತ ಹಾಗೂ ಕೆಲವು ರೋಗಿಗಳಲ್ಲಿ ವೃಷಣಗಳಲ್ಲಿ ಊತ ಕಾಣಿಸಿಕೊಳ್ಳುವುದು ಇದರ ಪ್ರಮುಖ ಲಕ್ಷಣಗಳಾಗಿವೆ. ರಾತ್ರಿ ವೇಳೆ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಸೋಂಕನ್ನು ಪತ್ತೆಹಚ್ಚಬಹುದು ಎಂದು ವಿವರಿಸಿದರು.

ಆರಂಭಿಕ ಹಂತದಲ್ಲಿಯೇ ಸೋಂಕನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗದ ಮುಂದಿನ ಪರಿಣಾಮಗಳನ್ನು ತಡೆಯಲು ಸಾಧ್ಯವಿದೆ. ಆದರೆ ದೀರ್ಘಕಾಲದ ಊತ ಉಂಟಾದ ಬಳಿಕ ಅದನ್ನು ಸಂಪೂರ್ಣ ಗುಣಪಡಿಸುವುದು ಕಷ್ಟವಾಗಬಹುದು. ಹೀಗಾಗಿ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ. ಮಾತನಾಡಿ, ಆನೆಕಾಲು ರೋಗ ತಡೆಗಟ್ಟುವಲ್ಲಿ ಡಿಇಸಿ ಮತ್ತು ಅಲ್ಬೆಂಡಜೋಲ್ ಮಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಹಾಗೂ ವೈದ್ಯಕೀಯ ಸಿಬ್ಬಂದಿಯ ಸಲಹೆಯಂತೆ ಮಾತ್ರೆಗಳನ್ನು ಸೇವಿಸಬೇಕು. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಮತ್ತು ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳುವುದು ಕೂಡ ರೋಗ ನಿಯಂತ್ರಣಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ಆನೆಕಾಲು ರೋಗಪೀಡಿತರನ್ನು ನಿರ್ಲಕ್ಷಿಸದೆ ಅವರಿಗೆ ಸೂಕ್ತ ಆರೈಕೆ, ಚಿಕಿತ್ಸೆ ಮತ್ತು ಅಗತ್ಯ ನೆರವು ಒದಗಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಸಫಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಲ್ಲಮ್ಮ, ಆಶಾ ಕಾರ್ಯಕರ್ತೆ ಜಮಿಲಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.