ರಾಯಚೂರು: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ನಾಯಕಿ ಬೆಹನ್ ಕುಮಾರಿ ಮಾಯಾವತಿ ಅವರ ಜನ್ಮದಿನವಾದ ಜನವರಿ 15ರಂದು ಪ್ರತಿವರ್ಷದಂತೆ ‘ಆರ್ಥಿಕ ಸಹಯೋಗ ದಿನ’ ಆಚರಿಸುವ ಮೂಲಕ ಪಕ್ಷದ ಸಂಘಟನೆಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಉದ್ದೇಶಿಸಲಾಗಿದೆ ಎಂದು ಬಿಎಸ್ಪಿ ಮುಖಂಡರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಹುಜನ ಸಮಾಜವನ್ನು ರಾಜಕೀಯವಾಗಿ ಸಂಘಟಿಸಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಕ್ಷವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಸಾರ್ವಜನಿಕರ ಆರ್ಥಿಕ ಸಹಕಾರ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಕನಸನ್ನು ನನಸಾಗಿಸುವ ಉದ್ದೇಶದಿಂದ ದಾದಾಸಾಹೇಬ್ ಕಾನ್ಶಿರಾಮ್ ಅವರು ಬಹುಜನ ಸಮಾಜವನ್ನು ಸಂಘಟಿಸಿ, ರಾಜಕೀಯ ಪ್ರಜ್ಞೆ ಮತ್ತು ಸ್ವಾಭಿಮಾನದ ಮನೋಭಾವ ಬೆಳೆಸಲು ಶ್ರಮಿಸಿದರು. ತಮ್ಮ ಉತ್ತರಾಧಿಕಾರಿಯಾಗಿ ಮಾಯಾವತಿ ಅವರನ್ನು ಆಯ್ಕೆ ಮಾಡಿ ಪಕ್ಷದ ಜವಾಬ್ದಾರಿಯನ್ನು ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ಸ್ಮರಿಸಿದ್ದಾರೆ.
‘ಒಂದು ಓಟು, ಒಂದು ನೋಟು’ ಎಂಬ ತತ್ವದಡಿ ಜನಸಾಮಾನ್ಯರಿಂದಲೇ ಆರ್ಥಿಕ ಸಹಕಾರ ಪಡೆದು ಪಕ್ಷವನ್ನು ಮುನ್ನಡೆಸುವ ಪರಂಪರೆಯನ್ನು ಬಿಎಸ್ಪಿ ಅನುಸರಿಸಿಕೊಂಡು ಬಂದಿದೆ. ದೊಡ್ಡ ಉದ್ಯಮಿಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಆರ್ಥಿಕ ನೆರವಿನ ಮೇಲೆ ಅವಲಂಬಿತವಾಗದೆ, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಸಹಕಾರದಿಂದ ಸಂಘಟನಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಇತರೆ ರಾಜಕೀಯ ಪಕ್ಷಗಳು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಚುನಾವಣಾ ಬಾಂಡ್ಗಳ ಮೂಲಕ ಹಣ ಸಂಗ್ರಹಿಸುತ್ತಿದ್ದವು ಎಂದು ಆರೋಪಿಸಿರುವ ಅವರು, ಬಿಎಸ್ಪಿ ಜನಸಾಮಾನ್ಯರ ಆರ್ಥಿಕ ಕೊಡುಗೆಗೆ ಆದ್ಯತೆ ನೀಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಮಾಯಾವತಿ ಅವರ ಜನ್ಮದಿನದ ಅಂಗವಾಗಿ ಆಚರಿಸುವ ಆರ್ಥಿಕ ಸಹಯೋಗ ದಿನವು ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಯಂಪ್ರೇರಿತ ದೇಣಿಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಭು ದಳಪತಿ, ಯಲ್ಲಪ್ಪ ಕಾಕರಗಲ್, ಜಿಲ್ಲಾ ಉಸ್ತುವಾರಿ ಎಚ್. ಶಿವಪ್ಪ ಬಲ್ಲಿದವ, ರಾಯಚೂರು ಲೋಕಸಭಾ ಉಸ್ತುವಾರಿ ಹಾಗೂ ತಾಲೂಕು ಉಪಾಧ್ಯಕ್ಷ ರತ್ನಾಕರ್ ಶಾವಂತಗೇರಾ, ತಾಲೂಕು ಅಧ್ಯಕ್ಷ ಯೇಸು ಡಿ.ಕೆ. ಕಮಲದಿನ್ನಿ, ತಾಲೂಕು ಖಜಾಂಚಿ ದುರುಗಪ್ಪ ಬುಂಕಲದೊಡ್ಡಿ ತಳಗೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್. ಹನುಮಂತ ಗಾಣದಾಳ ಬಕ್ಕನತ್ತಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



