ಲಿಂಗಸುಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ 7ನೇ ವಾರ್ಡ್ನ ಹೊಸ ಬಸ್ ನಿಲ್ದಾಣದ ಸಮೀಪವಿರುವ ಸಾರ್ವಜನಿಕ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ತುಂಬಿ, ಮಲಿನ ನೀರು ಚರಂಡಿ ಮೂಲಕ ಹಳ್ಳಕ್ಕೆ ಹರಿಯುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಸೆಪ್ಟಿಕ್ ಟ್ಯಾಂಕ್ ಖಾಲಿ ಮಾಡಿಸಿ ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿ ವಾರ್ಡ್ನ ನಾಗರಿಕರು ಪುರಸಭೆಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣ ಹಾಗೂ ಎಂಪೈರ್ ಚಿತ್ರಮಂದಿರದ ಸಮೀಪವಿರುವ ಸಾರ್ವಜನಿಕ ಮತ್ತು ಪ್ರಯಾಣಿಕರ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ತುಂಬಿದ್ದರೂ ಸಂಬಂಧಪಟ್ಟವರು ಅದನ್ನು ಖಾಲಿ ಮಾಡಿಸಲು ಕ್ರಮ ಕೈಗೊಂಡಿಲ್ಲ. ಪರಿಣಾಮ ಶೌಚಾಲಯದ ಮಲಿನ ನೀರು ಚರಂಡಿಯ ಮೂಲಕ ಸಮೀಪದ ಹಳ್ಳಕ್ಕೆ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಉಂಟಾಗಿದೆ ಎಂದು ನಿವಾಸಿಗಳು ಆರೋಪಿಸಿದರು.
ಹಳ್ಳದ ಸಮೀಪದಲ್ಲಿಯೇ ಹಲವು ಕುಟುಂಬಗಳು ವಾಸಿಸುತ್ತಿದ್ದು, ಶೌಚಾಲಯದ ಮಲಿನ ನೀರಿನಿಂದ ಉಂಟಾಗುತ್ತಿರುವ ದುರ್ವಾಸನೆಯಿಂದ ಮನೆಯ ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿನಿತ್ಯ ದುರ್ವಾಸನೆ ಸಹಿಸಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನೆಗಳ ಮುಂದೆ ಚಿಕ್ಕ ಮಕ್ಕಳು ಆಟವಾಡುತ್ತಿದ್ದು, ಹಿರಿಯ ನಾಗರಿಕರೂ ಇದೇ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ಮಲಿನ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾದರೆ ಮಲೇರಿಯಾ, ಡೆಂಗಿ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯ ಹೆಚ್ಚಾಗಬಹುದು. ಅಶುಚಿತ್ವದಿಂದ ಇತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯೂ ಇರುವುದರಿಂದ ಕೂಡಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಮಸ್ಯೆಯ ಕುರಿತು ಈಗಾಗಲೇ ಎರಡು ಮೂರು ಬಾರಿ ಬಸ್ ಡಿಪೋ ಅಧಿಕಾರಿಗಳನ್ನು ಖುದ್ದಾಗಿ ಭೇಟಿಯಾಗಿ ಮೌಖಿಕವಾಗಿ ದೂರು ನೀಡಲಾಗಿದೆ. ಸಾರ್ವಜನಿಕರ ಮನವಿಯ ಮೇರೆಗೆ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಶೌಚಾಲಯದ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಗುತ್ತಿಗೆದಾರರು ಸೆಪ್ಟಿಕ್ ಟ್ಯಾಂಕ್ ತುಂಬಿದ ಕೂಡಲೇ ಅದನ್ನು ನಿಯಮಾನುಸಾರ ಖಾಲಿ ಮಾಡಿಸಬೇಕು. ಆದರೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೌಚಾಲಯದ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿ ಕರ್ತವ್ಯಲೋಪ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಯ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಕೂಡಲೇ ಸೆಪ್ಟಿಕ್ ಟ್ಯಾಂಕ್ ಖಾಲಿ ಮಾಡಿಸಿ, ಚರಂಡಿ ಹಾಗೂ ಹಳ್ಳಕ್ಕೆ ಮಲಿನ ನೀರು ಹರಿಯುವುದನ್ನು ತಡೆಗಟ್ಟಬೇಕು. ಶೌಚಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಅಗತ್ಯ ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಚಪ್ಪ, ನಾರಾಯಣ, ಅಮರಗುಂಡಪ್ಪ, ಭೀಮರಾಯ, ಆನಂದ್ ಸಿಂಗ್, ಪ್ರದೀಪ್, ನರಸಿಂಹ ರೆಡ್ಡಿ, ಸಂಗನಗೌಡ, ದೊಡ್ಡನಗೌಡ ಪಾಟೀಲ್ ಸೇರಿದಂತೆ ವಾರ್ಡ್ನ ಅನೇಕ ನಾಗರಿಕರು ಉಪಸ್ಥಿತರಿದ್ದರು.



