ಅರಕೇರಾ, ನ.3: ಅರಕೇರಾ ತಾಲೂಕಿಗೆ ಸೇರ್ಪಡೆಯಾಗಿರುವ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳನ್ನು ಭೌಗೋಳಿಕ ಹಾಗೂ ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು ಎಂದು 920ಕ್ಕೂ ಅಧಿಕ ಗ್ರಾಮಸ್ಥರು ಒಮ್ಮತದಿಂದ ಆಗ್ರಹಿಸಿದ್ದಾರೆ.
ತಾಲೂಕಿನ ಸೋಮನಮರಡಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಅರಕೇರಾ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಸೋಮನಮರಡಿ, ಬಿ.ಆರ್. ಗುಂಡ, ಮ್ಯಾಕಲದೊಡ್ಡಿ, ನಾಗಲಾಪುರ ಹಾಗೂ ಸಂಪತ್ರಾಯನದೊಡ್ಡಿ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೈ ಎತ್ತುವ ಮೂಲಕ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಅರಕೇರಾ ತಾಲೂಕು ಕೇಂದ್ರವು ತಮ್ಮ ಗ್ರಾಮಗಳಿಂದ ಸಾಕಷ್ಟು ದೂರದಲ್ಲಿರುವುದರಿಂದ ಸರ್ಕಾರಿ ಕೆಲಸಗಳು, ಕಂದಾಯ ಇಲಾಖೆಯ ಸೇವೆಗಳು ಹಾಗೂ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಅಳಲು ತೋಡಿಕೊಂಡರು.
ಸೋಮನಮರಡಿ ಗ್ರಾಮದಿಂದ ಅರಕೇರಾ ತಾಲೂಕು ಕೇಂದ್ರಕ್ಕೆ ಸುಮಾರು 46 ಕಿ.ಮೀ., ಸಂಪತ್ರಾಯನದೊಡ್ಡಿಯಿಂದ 51 ಕಿ.ಮೀ., ಬಿ.ಆರ್. ಗುಂಡದಿಂದ 47 ಕಿ.ಮೀ., ಮ್ಯಾಕಲದೊಡ್ಡಿಯಿಂದ 45 ಕಿ.ಮೀ. ಹಾಗೂ ನಾಗಲಾಪುರದಿಂದ 48 ಕಿ.ಮೀ. ದೂರವಿದೆ. ಹೀಗಾಗಿ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗೂ ದೂರದ ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಇದಕ್ಕೆ ವಿರುದ್ಧವಾಗಿ ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿ ಈ ಗ್ರಾಮಗಳಿಗೆ ಅತ್ಯಂತ ಸಮೀಪದಲ್ಲಿದೆ. ಸೋಮನಮರಡಿಯಿಂದ ಜಾಲಹಳ್ಳಿಗೆ ಕೇವಲ 6 ಕಿ.ಮೀ. ಹಾಗೂ ಮ್ಯಾಕಲದೊಡ್ಡಿಯಿಂದ 4 ಕಿ.ಮೀ. ಅಂತರವಿದೆ. ಹೀಗಿರುವಾಗ ಭೌಗೋಳಿಕವಾಗಿ ಸಮೀಪವಿರುವ ದೇವದುರ್ಗ ತಾಲೂಕನ್ನು ಬಿಟ್ಟು ದೂರದ ಅರಕೇರಾ ತಾಲೂಕಿಗೆ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವುದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಾಲಹಳ್ಳಿ ಹೋಬಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಪಶು ಚಿಕಿತ್ಸಾಲಯ, ರೈತ ಸಂಪರ್ಕ ಕೇಂದ್ರ, ವಿದ್ಯುತ್ ಕೇಂದ್ರ ಹಾಗೂ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿವೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ 150ಎ ಮತ್ತು 61 ಹಾಗೂ ರಾಜ್ಯ ಹೆದ್ದಾರಿಗಳ ಸಂಪರ್ಕ ವ್ಯವಸ್ಥೆಯೂ ಇರುವುದರಿಂದ ಈ ಭಾಗದ ಜನರಿಗೆ ಜಾಲಹಳ್ಳಿಯೊಂದಿಗೆ ಹೆಚ್ಚಿನ ಸಂಪರ್ಕವಿದೆ ಎಂದು ಗ್ರಾಮಸ್ಥರು ವಿವರಿಸಿದರು.
ಕೃಷಿ ಚಟುವಟಿಕೆಗಳು, ಆರೋಗ್ಯ ಸೇವೆಗಳು, ಶಿಕ್ಷಣ, ಬ್ಯಾಂಕಿಂಗ್ ಹಾಗೂ ದಿನನಿತ್ಯದ ವ್ಯಾಪಾರ ವಹಿವಾಟುಗಳಿಗೆ ಈ ಗ್ರಾಮಗಳ ಜನರು ಜಾಲಹಳ್ಳಿಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಆಡಳಿತಾತ್ಮಕವಾಗಿಯೂ ದೇವದುರ್ಗ ತಾಲೂಕಿಗೆ ಸೇರ್ಪಡೆಯಾದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅರಕೇರಾ ಹೊಸ ತಾಲೂಕು ರಚನೆಯ ಸಂದರ್ಭದಲ್ಲಿ ಗ್ರಾಮಸ್ಥರ ಸಮರ್ಪಕ ಅಭಿಪ್ರಾಯ ಸಂಗ್ರಹಿಸದೆ ಈ ಐದು ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಇದರಿಂದ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಹಾಗೂ ಸಾಮಾನ್ಯ ಸಾರ್ವಜನಿಕರು ಅನಗತ್ಯ ಪ್ರಯಾಣ ವೆಚ್ಚ ಮತ್ತು ಸಮಯ ವ್ಯಯಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವಂತೆ 2025ರ ಮಾರ್ಚ್ 24ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೇ ಠರಾವು ಅಂಗೀಕರಿಸಲಾಗಿದೆ. ಆದರೂ ಇದುವರೆಗೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜನಾಭಿಪ್ರಾಯ ಸಂಗ್ರಹ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯವನ್ನು ಅಧಿಕೃತವಾಗಿ ದಾಖಲಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 4(2)(ಎ) ಹಾಗೂ ಸಂಬಂಧಪಟ್ಟ ಕಾನೂನು ನಿಯಮಗಳನ್ನು ಉಲ್ಲೇಖಿಸಿದ ಗ್ರಾಮಸ್ಥರು, ಗ್ರಾಮಗಳ ಭೌಗೋಳಿಕ ಸ್ಥಿತಿಗತಿ, ಸಾರ್ವಜನಿಕರ ಅನುಕೂಲತೆ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ 920ಕ್ಕೂ ಅಧಿಕ ಗ್ರಾಮಸ್ಥರು ಕೈ ಎತ್ತುವ ಮೂಲಕ ಬೇಡಿಕೆಗೆ ಬೆಂಬಲ ಸೂಚಿಸಿದ್ದು, ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಹಾಜರಿದ್ದವರ ಸಹಿಗಳನ್ನು ಪಡೆಯಲಾಯಿತು.
ಐದು ಗ್ರಾಮಗಳ ಜನರ ಒಮ್ಮತದ ಅಭಿಪ್ರಾಯವನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕರು ಎದುರಿಸುತ್ತಿರುವ ಪ್ರಯಾಣದ ತೊಂದರೆ, ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಮೂಲಸೌಕರ್ಯಗಳ ಲಭ್ಯತೆಯನ್ನು ಪರಿಶೀಲಿಸಿ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅರಕೇರಾ ತಹಶೀಲ್ದಾರ್ ಅಮರೇಶ, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಅಣ್ಣಾರಾವ್, ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವೈಶಾಲಿ ಝಳಕಿ, ಸೋಮನಮರಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರಾದ ಬಸಯ್ಯಸ್ವಾಮಿ, ಮಹದೇವ ಯಾದವ್, ಮೌಲಾಸಾಬ್, ಸಂಗಣ್ಣ, ವಕೀಲ ಬಸವರಾಜ, ಸಾಬಣ್ಣ ಕಮಲದಿನ್ನಿ, ಸಾಬಣ್ಣ ಹೂಗಾರ್, ಶಿವಣ್ಣ ಮಾಲಿ ಪಾಟೀಲ್, ಸಾಬಣ್ಣ ತಳವಾರ್, ಕರಿಯಪ್ಪ ಮಾಲಿ ಪಾಟೀಲ್, ಹನುಮಂತ ಬಿಂಗಿ, ಸಾಬಗೌಡ, ಬಿ.ಆರ್. ಗುಂಡ ಗ್ರಾಮದ ದುರ್ಗಪ್ಪ ಹಾಗೂ ವೆಂಕಟೇಶ್, ಮ್ಯಾಕಲದೊಡ್ಡಿಯ ಚನ್ನಬಸವ, ನಾಗರಾಜ್, ಕಕ್ಕಲದೊಡ್ಡಿಯ ಶಿವನಗೌಡ ಸೇರಿದಂತೆ ಐದು ಗ್ರಾಮಗಳ 920ಕ್ಕೂ ಅಧಿಕ ಸಾರ್ವಜನಿಕರು ಉಪಸ್ಥಿತರಿದ್ದರು.



