ಅರಕೆರಾ: ಮಕ್ಕಳ ಮನಸ್ಸನ್ನು ಪ್ರೀತಿ, ವಿಶ್ವಾಸದಿಂದ ಗೆದ್ದು ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಅಂಗನವಾಡಿ ಕಾರ್ಯಕರ್ತೆಯರು ನಿಜವಾದ ಶಿಲ್ಪಿಗಳು ಎಂದು ನಾಗಡದಿನ್ನಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ರವಿ ಜಾಪಾಂಡೆ ಅಭಿಪ್ರಾಯಪಟ್ಟರು.
ತಾಲೂಕಿನ ನಾಗಡದಿನ್ನಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 2ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದುರ್ಗ ಶಿಶು ಅಭಿವೃದ್ಧಿ ಯೋಜನೆ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಮತ್ತು ಪೋಷಕರ ಕಲಿಕಾ ಸಭೆ (ಇಸಿಸಿಇ) ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳು ಕೇವಲ ಅಕ್ಷರ ಜ್ಞಾನ ಕಲಿಸುವ ಸ್ಥಳಗಳಲ್ಲ. ಮಕ್ಕಳಿಗೆ ಪ್ರೀತಿ, ಮಮತೆ ಹಾಗೂ ಉತ್ತಮ ಸಂಸ್ಕಾರ ನೀಡುವ ಕೇಂದ್ರಗಳಾಗಿವೆ. ಅಳುವ ಮಕ್ಕಳನ್ನು ನಗಿಸುತ್ತಾ, ಅವರ ಕೈಹಿಡಿದು ಹೊರಜಗತ್ತನ್ನು ಪರಿಚಯಿಸುವ ಅಂಗನವಾಡಿ ಕಾರ್ಯಕರ್ತೆಯರು ತಾಯಿಯ ಸ್ಥಾನದಲ್ಲಿ ನಿಂತು ಮಕ್ಕಳನ್ನು ಪೋಷಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳು ದೇವಾಲಯಗಳಿದ್ದಂತೆ, ಅಲ್ಲಿನ ಮಕ್ಕಳೇ ದೇವರು. ಅವರ ಲಾಲನೆ, ಪಾಲನೆ ಮಾಡುವುದರ ಜೊತೆಗೆ ಪೌಷ್ಟಿಕ ಆಹಾರ ಒದಗಿಸಿ ಆರೋಗ್ಯಕರ ಬೆಳವಣಿಗೆಗೆ ಶ್ರಮಿಸುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ದುರುಗಮ್ಮ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ. ಮಕ್ಕಳ ಮತ್ತು ಪೋಷಕರ ಕಲಿಕಾ ಸಭೆಯು ಕೇವಲ ಶೈಕ್ಷಣಿಕ ಸಾಧನೆಗಳ ಚರ್ಚೆಗೆ ಸೀಮಿತವಾಗದೆ, ಮಕ್ಕಳ ಕಲಿಕೆ, ನಡವಳಿಕೆ, ಆಸಕ್ತಿ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಅರಿಯಲು ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದರು.
ಮಕ್ಕಳ ಬಾಲ್ಯದ ಆರೈಕೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ ಇಸಿಸಿಇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಬಲವರ್ಧನೆ, ಗುಣಮಟ್ಟದ ಪೌಷ್ಟಿಕ ಆಹಾರ ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಕಾರ ನೀಡುತ್ತಿದೆ. ಸಮುದಾಯ ಆಧಾರಿತ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ, ಸೃಜನಶೀಲತೆ ಮತ್ತು ವಿವಿಧ ಕೌಶಲಗಳನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಶೈಕ್ಷಣಿಕ ಸಾಮರ್ಥ್ಯ, ಕ್ರಿಯಾಶೀಲತೆ, ನಡವಳಿಕೆ, ಹವ್ಯಾಸಗಳು ಹಾಗೂ ಭಾವನಾತ್ಮಕ ಬೆಳವಣಿಗೆ ಕುರಿತು ಪೋಷಕರಿಗೆ ಮಾಹಿತಿ ನೀಡಲಾಯಿತು. ಮನೆಯಲ್ಲಿ ಮಕ್ಕಳಿಗೆ ಪೂರಕ ಕಲಿಕಾ ವಾತಾವರಣ ನಿರ್ಮಿಸುವುದು ಮತ್ತು ಅವರ ಕಲಿಕೆಯಲ್ಲಿ ಪೋಷಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮಹತ್ವವನ್ನು ವಿವರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶರಣಬಸವ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶೈಜಾದಿ ಬೇಗಂ, ಅಂಗನವಾಡಿ ಕಾರ್ಯಕರ್ತೆಯರಾದ ನಿರ್ಮಲಾ ಪಾಟೀಲ್, ಅನುಷಾ ಪಾಟೀಲ್, ಸಲೀಮಾ ಸೇರಿದಂತೆ ಮಕ್ಕಳ ತಾಯಂದಿರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ನೆರೆದಿದ್ದವರ ಗಮನ ಸೆಳೆದರು.


