ಅರಕೇರಾ, ಸೆ.28: ಗಾಣಧಾಳ ಗ್ರಾಮ ಪಂಚಾಯಿತಿಯನ್ನು ಅರಕೇರಾ ತಾಲ್ಲೂಕಿನಲ್ಲಿಯೇ ಮುಂದುವರಿಸುವುದರ ಜೊತೆಗೆ ಗಾಣಧಾಳ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ, ನಾಡ ಕಚೇರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಗಾಣಧಾಳ ಗ್ರಾಮವು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಮೀಪದಲ್ಲಿದ್ದು, ಗ್ರಾಮ ಪಂಚಾಯಿತಿ ಕಾರ್ಯಾಲಯವೂ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ ಸೇರಿದಂತೆ ವಿವಿಧ ಸರ್ಕಾರಿ ದಾಖಲೆಗಳು ಅಗತ್ಯವಿದ್ದು, ಅವುಗಳನ್ನು ಪಡೆಯಲು ಗಾಣಧಾಳದಿಂದ ಅರಕೇರಾ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕಾಗಿದೆ. ಗಾಣಧಾಳದಿಂದ ಅರಕೇರಾಗೆ ಸುಮಾರು 21 ಕಿ.ಮೀ. ಅಂತರವಿರುವುದರಿಂದ ಸಾರ್ವಜನಿಕರಿಗೆ ಸಮಯ ಹಾಗೂ ಹಣ ಎರಡೂ ವ್ಯಯವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಗಾಣಧಾಳ ಗ್ರಾಮದಲ್ಲಿ ಈಗಾಗಲೇ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಬ್ಯಾಂಕ್, ಪಶು ಆಸ್ಪತ್ರೆ, ಶಾಲೆ ಮತ್ತು ಪ್ರೌಢಶಾಲೆ ಸೇರಿದಂತೆ ಹಲವು ಮೂಲಸೌಕರ್ಯಗಳಿವೆ. ಹೀಗಾಗಿ ಗಾಣಧಾಳವನ್ನು ಹೋಬಳಿ ಕೇಂದ್ರವನ್ನಾಗಿ ರೂಪಿಸಲು ಅಗತ್ಯ ಸೌಲಭ್ಯಗಳು ಲಭ್ಯವಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಾರ್ವಜನಿಕರು, ರೈತರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗಾಣಧಾಳ ಗ್ರಾಮ ಪಂಚಾಯಿತಿಯನ್ನು ಅರಕೇರಾ ತಾಲ್ಲೂಕಿನಲ್ಲಿಯೇ ಉಳಿಸಿ, ಗಾಣಧಾಳವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಿ ನಾಡ ಕಚೇರಿ ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾನಯ್ಯ ಮಾಲಿ ಪಾಟೀಲ್ ಗಾಣದಾಳ, ಕೊಳಪ್ಪ ದೇಸಾಯಿ ಕಕ್ಕಲದೊಡ್ಡಿ, ಗಾಣದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಯಲಗಟ್ಟಿ, ಉಪಾಧ್ಯಕ್ಷ ನರಸಣ್ಣ ನಾಯಕ, ಬಸವರಾಜ ನಾಯಕ ಕಾವಲಿ ಗಾಣದಾಳ, ಶಿವರಾಜ ನಾಯಕ ಜಿಲ್ಲೆ ಕಮಲದಿನ್ನಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸೋಫಿ ಸಾಹೇಬು ಗಾಣದಾಳ, ಬಸವರಾಜ ದೊಡ್ಮನೆ ಗಾಣದಾಳ, ಶಿವರಾಜ ನಾಯಕ ಮಂಡಲಗುಡ್ಡ ಹಾಗೂ ದೇವದುರ್ಗ ತಾಲೂಕು ವಾಲ್ಮೀಕಿ ಸ್ವಾಭಿಮಾನಿ ಚಳವಳಿ ಸಂಘದ ಅಧ್ಯಕ್ಷ ಶಿವಪ್ಪ ನಾಯಕ ಕಕ್ಕಲದೊಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


