ರಾಯಚೂರು, ನ.4: ಮಾದಕ ವಸ್ತುಗಳು, ತಂಬಾಕು ಹಾಗೂ ಇತರ ವ್ಯಸನಗಳು ಯುವಜನರ ಭವಿಷ್ಯಕ್ಕೆ ಮಾರಕವಾಗಿದ್ದು, ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವ ಮೂಲಕ ನಶೆಮುಕ್ತ ರಾಯಚೂರು ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಕರೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ರಿಮ್ಸ್ ಬೋಧಕ ಆಸ್ಪತ್ರೆ, ನವೋದಯ ವೈದ್ಯಕೀಯ ಮಹಾವಿದ್ಯಾಲಯ, ಎ.ಎಂ.ಇ. ದಂತ ವೈದ್ಯಕೀಯ ಕಾಲೇಜು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ರಾಯಚೂರು ಅಭಿಯಾನ’ ಮತ್ತು ‘ತಂಬಾಕು ಮುಕ್ತ ಯುವ ಅಭಿಯಾನ 4.0’ರ ಜಾಗೃತಿ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹದಗೆಡಿಸುವುದರ ಜೊತೆಗೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ವಿಶೇಷವಾಗಿ ಯುವಜನರು ಕ್ಷಣಿಕ ಆಕರ್ಷಣೆಗೆ ಒಳಗಾಗಿ ದುಶ್ಚಟಗಳ ದಾಸರಾಗದೆ ಶಿಕ್ಷಣ, ಕ್ರೀಡೆ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಸನಮುಕ್ತ ಸಮಾಜ ನಿರ್ಮಾಣವು ಕೇವಲ ಸರ್ಕಾರ ಅಥವಾ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ. ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಸಂಘ-ಸಂಸ್ಥೆಗಳು, ಪಾಲಕರು ಹಾಗೂ ಸಾರ್ವಜನಿಕರು ಸಂಘಟಿತ ಪ್ರಯತ್ನ ನಡೆಸಿದಾಗ ಮಾತ್ರ ಮಾದಕ ವಸ್ತುಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಕುಟುಂಬ ಮತ್ತು ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಲ್ಲಿ ಅಕ್ಟೋಬರ್ 28ರಿಂದ ಡಿಸೆಂಬರ್ 26ರವರೆಗೆ 60 ದಿನಗಳ ಕಾಲ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಹಮ್ಮಿಕೊಳ್ಳಲಾಗಿದೆ. ಯುವಜನರನ್ನು ತಂಬಾಕು ಹಾಗೂ ನಿಕೋಟಿನ್ ವ್ಯಸನದಿಂದ ರಕ್ಷಿಸುವುದು, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಮತ್ತು ತಂಬಾಕು ನಿಯಂತ್ರಣ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಲಾಯಿತು.
ಅಭಿಯಾನದ ಭಾಗವಾಗಿ ಶಾಲಾ-ಕಾಲೇಜುಗಳನ್ನು ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸುವುದು, ಆಯ್ದ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಂಸ್ಥೆಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ತಡೆಯಲು ವಿಶೇಷ ಗಮನ ಹರಿಸಲಾಗುವುದು.
ಇದಲ್ಲದೆ, ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳು, ಕಿರುಚಿತ್ರಗಳು, ರೀಲ್ಸ್, ಆನ್ಲೈನ್ ರಸಪ್ರಶ್ನೆಗಳು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಯುವಜನರಿಗೆ ತಂಬಾಕು ಮತ್ತು ಮಾದಕ ವಸ್ತುಗಳ ಅಪಾಯಗಳ ಕುರಿತು ಮಾಹಿತಿ ತಲುಪಿಸುವ ಉದ್ದೇಶ ಹೊಂದಲಾಗಿದೆ.
ಮಾದಕ ವಸ್ತುಗಳ ನಿರಂತರ ಸೇವನೆಯಿಂದ ಯಕೃತ್ತು, ಶ್ವಾಸಕೋಶ, ಹೃದಯ ಹಾಗೂ ಮೂತ್ರಪಿಂಡಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ಕ್ಯಾನ್ಸರ್, ಹೃದ್ರೋಗ, ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ವ್ಯಸನಕ್ಕೆ ಒಳಗಾದವರು ಅದನ್ನು ಮರೆಮಾಚದೆ ವೈದ್ಯಕೀಯ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯ ನೆರವು ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡಿದರು.
ವ್ಯಸನದಿಂದ ಹೊರಬರಲು ಬಯಸುವವರಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯ ಬಿ ಬ್ಲಾಕ್ನ ಕೊಠಡಿ ಸಂಖ್ಯೆ 27ರಲ್ಲಿ ಆಪ್ತ ಸಮಾಲೋಚನೆ ಸೌಲಭ್ಯ ಕಲ್ಪಿಸಲಾಗಿದೆ. ಅಗತ್ಯ ಮಾರ್ಗದರ್ಶನಕ್ಕಾಗಿ ರಾಷ್ಟ್ರೀಯ ಉಚಿತ ಸಹಾಯವಾಣಿ ಸಂಖ್ಯೆ 14446 ಅನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಿಂದ ಆರಂಭವಾದ ಜಾಗೃತಿ ನಡಿಗೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಸಾಗಿತು. ನಡಿಗೆಯಲ್ಲಿ ಭಾಗವಹಿಸಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಸಂದೇಶ ಸಾರಿದರು.
ನಗರದ ತೀನ್ ಕಂದಿಲ್ ವೃತ್ತದಲ್ಲಿ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು. ಬಸ್ ನಿಲ್ದಾಣದಲ್ಲಿಯೂ ಸಾರ್ವಜನಿಕರಿಗೆ ವ್ಯಸನಮುಕ್ತ ಜೀವನದ ಮಹತ್ವವನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ, ರಿಮ್ಸ್ ನಿರ್ದೇಶಕ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯಶಂಕರ, ರಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ರಾಹುಲ್ ಸಿ. ಕೀರ್ತೆ, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಗುರುದತ್ತ ಎಸ್. ಪವಾರ, ಡಾ. ಬಸವರಾಜ ಎಂ ಪಾಟೀಲ, ಎ.ಎಂ.ಇ. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸೋಮನಾಥ ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಶೆಮುಕ್ತ ರಾಯಚೂರು ನಿರ್ಮಾಣದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಮಾದಕ ವಸ್ತುಗಳಿಂದ ದೂರವಿದ್ದು, ಕುಟುಂಬ ಹಾಗೂ ಸಮಾಜದಲ್ಲಿ ವ್ಯಸನದ ವಿರುದ್ಧ ಅರಿವು ಮೂಡಿಸುವ ಮೂಲಕ ಆರೋಗ್ಯಕರ ಮತ್ತು ಸುರಕ್ಷಿತ ಜಿಲ್ಲೆಯ ನಿರ್ಮಾಣಕ್ಕೆ ಶ್ರಮಿಸುವ ಸಂಕಲ್ಪ ಮಾಡಲಾಯಿತು.



