ದೇವದುರ್ಗ, ನ. 3: ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) 101ನೇ ವರ್ಷದ ಪಥಸಂಚಲನವು ಮಂಗಳವಾರ ಪಟ್ಟಣದಲ್ಲಿ ಶಿಸ್ತುಬದ್ಧವಾಗಿ ಹಾಗೂ ಸಂಭ್ರಮದಿಂದ ಜರುಗಿತು. ಸಂಘದ ಸ್ವಯಂಸೇವಕರು ಸಾಂಪ್ರದಾಯಿಕ ಗಣವೇಷ ಧರಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.
ಪಥಸಂಚಲನದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಗಲ್ಲಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಹಿಳೆಯರು ಮತ್ತು ಯುವತಿಯರು ರಸ್ತೆಗಳಲ್ಲಿ ಬಣ್ಣಬಣ್ಣದ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ಸ್ವಯಂಸೇವಕರನ್ನು ಸ್ವಾಗತಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಪುಷ್ಪವೃಷ್ಟಿ ಮಾಡುವ ಮೂಲಕ ಪಥಸಂಚಲನಕ್ಕೆ ಗೌರವ ಸಲ್ಲಿಸಿದರು. ಸ್ವಯಂಸೇವಕರ ಶಿಸ್ತುಬದ್ಧ ಹೆಜ್ಜೆಗಳು ಹಾಗೂ ಸಾರ್ವಜನಿಕರ ಉತ್ಸಾಹ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮಪೂಜ್ಯ ಶಿವಾಚಾರ್ಯ ಗುರುಬಸವ ರಾಜಗುರುಗಳು ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಸುದೀರ್ಘ ಇತಿಹಾಸ ಹಾಗೂ ವಿಶಿಷ್ಟ ಪರಂಪರೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾಗಿದೆ. ದೇಶದ ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರೀಯತೆಯ ಸಂರಕ್ಷಣೆಯ ಉದ್ದೇಶದಿಂದ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಭಾರತವು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಮೊಘಲರು, ಡಚ್ಚರು, ಪೋರ್ಚುಗೀಸರು ಸೇರಿದಂತೆ ವಿವಿಧ ವಿದೇಶಿ ಶಕ್ತಿಗಳ ಆಕ್ರಮಣಗಳನ್ನು ಎದುರಿಸಿದರೂ ಭಾರತೀಯ ಸಂಸ್ಕೃತಿ ತನ್ನ ಮೂಲ ಸ್ವರೂಪ ಹಾಗೂ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ. ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ವಕ್ತಾರ ಪ್ರಹ್ಲಾದ ಕೆಂಗಲ್ ಮಾತನಾಡಿ, ಭಾರತದ ಸನಾತನ ಸಂಸ್ಕೃತಿ, ವೈವಿಧ್ಯಮಯ ಆಚರಣೆಗಳು ಹಾಗೂ ಪರಂಪರೆಗಳು ದೇಶದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತವೆ. ಇಂತಹ ಮೌಲ್ಯಗಳನ್ನು ಯುವಪೀಳಿಗೆಗೆ ಪರಿಚಯಿಸುವ ಮೂಲಕ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ವಿಜಯದಶಮಿ ಹಬ್ಬವು ಶಕ್ತಿ ಆರಾಧನೆ, ಸತ್ಯದ ವಿಜಯ ಹಾಗೂ ದುಷ್ಟಶಕ್ತಿಗಳ ಸಂಹಾರದ ಸಂಕೇತವಾಗಿದೆ. ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ, ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರಭಕ್ತಿಯ ಗುಣಗಳನ್ನು ಬೆಳೆಸುವ ಆಶಯದೊಂದಿಗೆ ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದರು. ವ್ಯಕ್ತಿತ್ವ ನಿರ್ಮಾಣದ ಮೂಲಕ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ದೇಶದ ಭವಿಷ್ಯ ರೂಪಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ಶಿಸ್ತು, ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಭಿನವ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಗಳ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳು, ಸ್ವಯಂಸೇವಕರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



