ದೇವದುರ್ಗ: ಕನ್ನಡ ನಾಡು ದೇಶದಲ್ಲಿಯೇ ವಿಶಿಷ್ಟವಾದ ರಾಜ್ಯ. ಇದು ಸಾಧಕರ ಕರ್ಮಭೂಮಿಯೂ, ಸಾಧುಸಂತರ ಪುಣ್ಯಭೂಮಿಯೂ ಹೌದು. ಸಾಧಕರಿಗೆ ಕನ್ನಡನಾಡೇ ದಿವ್ಯಭೂಮಿ. ನಮ್ಮ ನಾಡಿನ ಇತಿಹಾಸವೇ ಸ್ಫೂರ್ತಿದಾಯಕ. ಚಿನ್ನ-ಬೆಳ್ಳಿಯನ್ನು ರಸ್ತೆಗಳಲ್ಲಿ ರಾಶಿಗಟ್ಟಲೆ ತೂಗಿ ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯ, ಕನ್ನಡಿಗರನ್ನು ಒಗ್ಗೂಡಿಸಿದ ಕನ್ನಡದ ಮೊದಲ ದೊರೆ ಮಯೂರವರ್ಮ, ಕನ್ನಡದ ಮೊದಲ ಶಿಲಾಶಾಸನವಾದ ಹಲ್ಮಿಡಿ ಶಾಸನ... ಹೀಗೆ ನೂರಾರು ಐತಿಹಾಸಿಕ ಹೆಜ್ಜೆಗುರುತುಗಳು ಕನ್ನಡ ನಾಡಿನ ಹಿರಿಮೆಯನ್ನು ಸಾರುತ್ತವೆ. ಅವುಗಳನ್ನು ನಿತ್ಯ ಸ್ಮರಿಸುತ್ತಾ ಭಾಷಾಭಿಮಾನದಿಂದ ಮುನ್ನಡೆಯುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.

ಹರಿದು ಹಂಚಿಹೋಗಿದ್ದ ಕನ್ನಡ ನಾಡು ಏಕೀಕರಣಗೊಂಡ ಇತಿಹಾಸವೇ ರೋಚಕ. 1956ರ ನವೆಂಬರ್ 1ರಂದು ಕನ್ನಡಿಗರ ಬಹುವರ್ಷಗಳ ಆಶಯದಂತೆ ಕನ್ನಡ ಭಾಷಿಕ ಪ್ರದೇಶಗಳು ಏಕೀಕರಣಗೊಂಡವು. ಆ ಶುಭದಿನವೇ ಕನ್ನಡ ರಾಜ್ಯೋತ್ಸವವಾಗಿ ಆಚರಣೆಗೆ ಬಂದಿತು. ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಕನ್ನಡಪರ ಮನಸ್ಸುಗಳು ಸಂಭ್ರಮಿಸಿದ ಐತಿಹಾಸಿಕ ಕ್ಷಣವದು. ಇಂತಹ ಮಹತ್ವದ ಸಂದರ್ಭಕ್ಕೆ ಈಗ 71ನೇ ರಾಜ್ಯೋತ್ಸವದ ಸಂಭ್ರಮ. ಮೈಸೂರು ರಾಜ್ಯವೆಂದು ಕರೆಯಲ್ಪಡುತ್ತಿದ್ದ ನಮ್ಮ ನಾಡಿಗೆ 1973ರಲ್ಲಿ 'ಕರ್ನಾಟಕ' ಎಂದು ಮರುನಾಮಕರಣ ಮಾಡಿರುವುದು ಮರೆಯಲಾಗದ ಐತಿಹಾಸಿಕ ಸಂದರ್ಭವಾಗಿದೆ.

ಇಂತಹ ಭವ್ಯ ಇತಿಹಾಸ ಹೊಂದಿರುವ ಕನ್ನಡ ನಾಡಿಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ರಾಯಚೂರು ಜಿಲ್ಲೆಯ ಕಲಾ ಸಂಕುಲ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿದೆ. ಅದರಂತೆ ಸಂಸ್ಥೆಯ ವತಿಯಿಂದ ನೀಡಲಾಗುವ ಈ ಬಾರಿಯ ರಾಜ್ಯಮಟ್ಟದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡದ ಕಂದ, ಸಂಘಟನಾ ಚತುರ, ಕಂದಾಯ ಇಲಾಖೆ ನೌಕರ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಅಭಿಷೇಕ ಸುರೇಶ ಹುಡೇದ್ ಆಯ್ಕೆಯಾಗಿದ್ದಾರೆ.

ನವೆಂಬರ್ 8ರಂದು ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿರುವ 'ದೇಸಿ ಸಂಭ್ರಮ' ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗದೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಯುವ ಪ್ರತಿಭೆ ಅಭಿಷೇಕ ಸುರೇಶ ಹುಡೇದ್ ಅವರು 1997ರ ಏಪ್ರಿಲ್ 29ರಂದು ಜನಿಸಿದರು. ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದವರಾದ ಇವರು ಸುರೇಶ ಹಾಗೂ ಕವಿತಾ ದಂಪತಿಯ ಪುತ್ರ. ಬಿ.ಎಸ್ಸಿ. ಪದವೀಧರರಾಗಿರುವ ಅಭಿಷೇಕ ಅವರು ಕಳೆದ 10 ವರ್ಷಗಳಿಂದ ದೇವದುರ್ಗದಲ್ಲಿ ಕಂದಾಯ ಇಲಾಖೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸರ್ಕಾರಿ ಕಡತಗಳ ನಿರ್ವಹಣೆ, ಪತ್ರ ವ್ಯವಹಾರ, ಸಾರ್ವಜನಿಕ ಯೋಜನೆಗಳ ಅನುಷ್ಠಾನ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಅನುಭವ ಹೊಂದಿರುವ ಅಭಿಷೇಕ ಸುರೇಶ ಹುಡೇದ್ ಅವರು ಸಂಘಟನಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಉತ್ತಮ ಜನಸಂಪರ್ಕ ಹಾಗೂ ಜವಾಬ್ದಾರಿಯುತ ಕಾರ್ಯನಿರ್ವಹಣೆಯ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದೇವದುರ್ಗ ತಾಲೂಕು ಘಟಕದ ಜಂಟಿ ಕಾರ್ಯದರ್ಶಿಯಾಗಿ ಹಾಗೂ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘಟನಾ ಅನುಭವದೊಂದಿಗೆ ಸರ್ಕಾರಿ ನೀತಿ, ನಿಯಮಗಳು ಹಾಗೂ ಕಾನೂನುಗಳ ಕುರಿತು ಉತ್ತಮ ಅರಿವು ಹೊಂದಿದ್ದಾರೆ.

ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಳವಾದ ಜ್ಞಾನ, ಒತ್ತಡದ ಸಂದರ್ಭದಲ್ಲಿಯೂ ಕೆಲಸ ನಿರ್ವಹಿಸುವ ಸಾಮರ್ಥ್ಯ, ದಿನದ 24 ಗಂಟೆಯೂ ಸೇವೆಗೆ ಸಿದ್ಧವಿರುವ ಮನೋಭಾವ, ಪ್ರಾಮಾಣಿಕತೆ ಮತ್ತು ನಿಷ್ಠೆ ಇವರ ಕಾರ್ಯವೈಖರಿಯ ವಿಶೇಷತೆಗಳಾಗಿವೆ. ಕಡಿಮೆ ಮಾತು, ಹೆಚ್ಚು ಕೆಲಸ ಎಂಬ ತತ್ವವನ್ನು ಅಳವಡಿಸಿಕೊಂಡಿರುವ ಅಭಿಷೇಕ ಅವರು ಸರ್ಕಾರಿ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದಾರೆ.

ಅಭಿಷೇಕ ಸುರೇಶ ಹುಡೇದ್ ಅವರ ಸೇವೆ ಹಾಗೂ ಸಂಘಟನಾ ಚಟುವಟಿಕೆಗಳನ್ನು ಗುರುತಿಸಿ ಕಲಾ ಸಂಕುಲ ಸಂಸ್ಥೆಯು ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನೀಯವಾಗಿದೆ. ದೇವದುರ್ಗದಂತಹ ಹಿಂದುಳಿದ ತಾಲೂಕಿನಲ್ಲಿ ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡುತ್ತಿರುವ ಯುವ ನೌಕರನಿಗೆ ದೊರೆಯುತ್ತಿರುವ ಈ ಗೌರವ ಮತ್ತಷ್ಟು ಯುವಕರಿಗೆ ಸ್ಫೂರ್ತಿಯಾಗಲಿದೆ.

ಅಭಿಷೇಕ ಸುರೇಶ ಹುಡೇದ್ ಅವರು ಮುಂದಿನ ದಿನಗಳಲ್ಲಿಯೂ ಸರ್ಕಾರಿ ಸೇವೆ, ಸಂಘಟನೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ನಾಡಿಗೆ ಕೀರ್ತಿ ತರಲಿ ಎಂಬುದು ಎಲ್ಲರ ಆಶಯವಾಗಿದೆ.