ದೇವದುರ್ಗ: ತಾಲೂಕಿನ ಸಾಸ್ಸಿಗೇರಾ ಸೀಮಾದ ಕೃಷಿ ಜಮೀನಿನಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚುನ್ನಪ್ಪ ಪೂಜೇರಿ ಬಣ) ತಾಲೂಕು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿ, ಅನುಮತಿ ನೀಡದಂತೆ ಒತ್ತಾಯಿಸಿದ್ದಾರೆ.

ದೇವದುರ್ಗ ಹೋಬಳಿಯ ಸಾಸ್ಸಿಗೇರಾ ಸೀಮಾದ ಸರ್ವೆ ನಂ.69ರಲ್ಲಿರುವ 30 ಗುಂಟೆ ಕೃಷಿ ಜಮೀನು ಶರಣಗೌಡ ತಂದೆ ಭೀಮರಾಯ ಹಂಚಿನಾಳ ಅವರಿಗೆ ಸೇರಿದ್ದು, ಮಲ್ಲಪ್ಪ ವಿಶ್ವಕರ್ಮ ಅವರು ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ವೈನ್‌ಶಾಪ್ ತೆರೆಯಲು ಮುಂದಾಗಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.

ಕೃಷಿ ಚಟುವಟಿಕೆಗಳಿಗೆ ಬಳಸಬೇಕಾದ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಸೂಕ್ತವಲ್ಲ. ಮದ್ಯದಂಗಡಿ ತೆರೆಯುವ ಕುರಿತು ಅಕ್ಕಪಕ್ಕದ ಜಮೀನುಗಳ ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಮದ್ಯದಂಗಡಿ ಆರಂಭವಾದರೆ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುವುದರ ಜೊತೆಗೆ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮದ್ಯದಂಗಡಿ ಆರಂಭವಾದರೆ ಮದ್ಯವ್ಯಸನಿಗಳು ಕೃಷಿ ಜಮೀನುಗಳಲ್ಲಿ ಮದ್ಯ ಸೇವಿಸಿ ಖಾಲಿ ಬಾಟಲಿಗಳನ್ನು ಎಸೆಯುವ ಸಾಧ್ಯತೆಯಿದೆ. ಇದರಿಂದ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ಕೂಲಿ ಕಾರ್ಮಿಕರ ಸುರಕ್ಷತೆಗೂ ಸಮಸ್ಯೆಯಾಗಬಹುದು. ಈಗಾಗಲೇ ಮದ್ಯವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಮತ್ತೊಂದು ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ರೈತರ ಹಿತಾಸಕ್ತಿ, ಮಹಿಳೆಯರ ಸುರಕ್ಷತೆ ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಜಮೀನಿನಲ್ಲಿ ವೈನ್‌ಶಾಪ್ ತೆರೆಯಲು ಅನುಮತಿ ನಿರಾಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ದೊರೆ ಸಿಪ್ಪತ್ತಗೇರಾ, ಗೌರವಾಧ್ಯಕ್ಷ ಮಹೇಂದ್ರ ಮೇತ್ರೆ ಗೌರಂಪೇಟೆ, ಉಪಾಧ್ಯಕ್ಷ ತಿಮ್ಮನಗೌಡ ಗೌರಂಪೇಟೆ, ಕಾರ್ಯದರ್ಶಿ ಮಾರುತಿ ನಾಯಕ, ಕೋಶಾಧ್ಯಕ್ಷ ಸುರೇಶಗೌಡ, ಸಂಘಟನಾ ಕಾರ್ಯದರ್ಶಿಗಳಾದ ಇಬ್ರಾಹಿಂ ಸಾಬ್, ನಾಗರಾಜ ತಳವಾರದೊಡ್ಡಿ, ಸಾಮಾಜಿಕ ಜಾಲತಾಣ ಅಧ್ಯಕ್ಷ ಶರಣು ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.