ಹಟ್ಟಿ ಚಿನ್ನದ ಗಣಿ: ಪಟ್ಟಣದ ಶ್ರೀ ಶರಣಬಸವೇಶ್ವರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಪವಿತ್ರಾ ಪರಸಪ್ಪ ಅವರು 2026–27ನೇ ಸಾಲಿನ 17 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಲಿಂಗಸುಗೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹೂನೂರ ಅವರು ಶ್ರೀ ಶರಣಬಸವೇಶ್ವರ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ಪವಿತ್ರಾ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪವಿತ್ರಾ ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದವರೆಗೆ ಸಾಧನೆ ಮುಂದುವರಿಸಲಿ ಎಂದು ಶುಭ ಹಾರೈಸಿದರು.

ಶ್ರೀ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಶಾಂತ್ ಪಾಟೀಲ್ ಮಾತನಾಡಿ, ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಪವಿತ್ರಾ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆಯ ಹಿಂದೆ ಪಾಲಕರ ಪ್ರೋತ್ಸಾಹ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ರಾಯಪ್ಪ ಬಳಗಾನೂರು ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸುವಂತೆ ಹಾರೈಸಿದರು.

ಈ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಚಂದ್ರಶೇಖರ, ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.