ದೇವದುರ್ಗ: ವ್ಯಾಪಾರ ಎಂದರೆ ಕೇವಲ ಲಾಭ-ನಷ್ಟದ ಲೆಕ್ಕವಲ್ಲ, ಅದು ಮನುಷ್ಯತ್ವದ ಸೇವೆ. ಜೊತೆಗೆ ಮಾನವೀಯತೆಯ ಪಾಠವೂ ಹೌದು ಎಂಬುದನ್ನು ಬದುಕಿನ ಮೂಲಕ ತೋರಿಸಿಕೊಟ್ಟವರು ದೇವದುರ್ಗದ ಯುವ ಉದ್ಯಮಿ ಹಾಗೂ ಲಿಮ್ರಾ ಜ್ಯೂಸ್ ಸೆಂಟರ್‌ನ ಮಾಲೀಕ ಮಹ್ಮದ್ ಮಹಿಬೂಬ್ ನಾಗುಂಡಿ. ಇಂತಹ ಉದ್ಯಮಿಗೆ ಕಲಾ ಸಂಕುಲ ಸಂಸ್ಥೆಯಿಂದ ನವೆಂಬರ್ 8ರಂದು ರಂಗಮಂದಿರದಲ್ಲಿ ಆಯೋಜಿಸಲಾಗಿರುವ ‘ದೇಸೀ ಸಂಭ್ರಮ’ ಸಮಾರಂಭದಲ್ಲಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮಹ್ಮದ್ ಮಹಿಬೂಬ್ ನಾಗುಂಡಿ ಅವರು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಓದಿದ್ದು, ತಂದೆ ಮಹ್ಮದ್ ಖಾಸಿಂಸಾಬ್ ನಾಗುಂಡಿ ಅವರು 1996ರಲ್ಲಿ ಸ್ಥಾಪಿಸಿದ ಲಿಮ್ರಾ ಜ್ಯೂಸ್ ಸೆಂಟರ್‌ನೊಂದಿಗೆ ವ್ಯಾಪಾರೋದ್ಯಮಕ್ಕೆ ಕಾಲಿಟ್ಟರು. ಅಂದಿನಿಂದ ಇಂದಿನವರೆಗೆ 30 ವರ್ಷಗಳಿಂದ ನಿರಂತರವಾಗಿ ಗ್ರಾಹಕರ ಮೆಚ್ಚುಗೆ ಗಳಿಸುತ್ತಾ ಬಂದಿದ್ದಾರೆ.

ತಂದೆಯ ಗರಡಿಯಲ್ಲಿ ವ್ಯಾಪಾರದ ಆಳ-ಅಗಲವನ್ನು ಅರಿತುಕೊಂಡ ಮಹ್ಮದ್ ಮಹಿಬೂಬ್ ಅವರು ಒಂದೇ ಜ್ಯೂಸ್ ಸೆಂಟರ್‌ಗೆ ಸೀಮಿತವಾಗದೆ ವಿವಿಧ ವ್ಯಾಪಾರಗಳಲ್ಲಿ ತೊಡಗಿಸಿಕೊಂಡರು. ವಿಶೇಷ ಬಿರಿಯಾನಿ, ರುಚಿಕರ ಜಿಲೇಬಿ, ಸಮೋಸಾ, ಬಾಲಿಶ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಯಶಸ್ವಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಮಹ್ಮದ್ ಮಹಿಬೂಬ್ ಅವರ ವಿಶೇಷತೆ ಎಂದರೆ, ತಮ್ಮಲ್ಲಿ ಕೆಲಸ ಮಾಡುವವರನ್ನು ತಮ್ಮ ಕುಟುಂಬದ ಸದಸ್ಯರಂತೆ ಭಾವಿಸುವುದು. ನಾಗಾಲ್ಯಾಂಡ್, ಒಡಿಶಾ, ಹೈದರಾಬಾದ್, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕೆಲಸ ಹುಡುಕಿಕೊಂಡು ಬಂದವರಿಗೆ ಉದ್ಯೋಗ ಹಾಗೂ ಆಶ್ರಯ ನೀಡಿದ್ದಾರೆ.

ತಮಗೆ ನಷ್ಟವಾದರೂ ಸರಿ, ಕೆಲಸಗಾರರಿಗೆ ಮಾತ್ರ ಕೈತುಂಬ ಸಂಬಳ ನೀಡುವ ಉದಾರ ಗುಣಕ್ಕೆ ಹೆಸರುವಾಸಿಯಾಗಿದ್ದಾರೆ. ‘ನಷ್ಟ ಎಂಬ ಪದದ ಅರ್ಥ ನನಗೆ ಗೊತ್ತಿಲ್ಲ. ಆದರೆ ನನ್ನ ಜೊತೆ ದುಡಿಯುವವರ ಹೊಟ್ಟೆಯ ಬಗ್ಗೆ ನನಗೆ ಚೆನ್ನಾಗಿ ಗೊತ್ತು’ ಎಂಬುದು ಅವರ ಮನದಾಳದ ಮಾತು.

ಬೇಸಿಗೆಯಲ್ಲಿ ಲಿಮ್ರಾ ಜ್ಯೂಸ್ ಸೆಂಟರ್ ಗ್ರಾಹಕರಿಂದ ಗಿಜಿಗುಡುತ್ತಿರುತ್ತದೆ. ಚಿಕ್ಕು, ಆ್ಯಪಲ್, ಬಾದಾಮಿ, ಪೈನಾಪಲ್ ಜ್ಯೂಸ್‌ಗಳನ್ನು ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ತಯಾರಿಸಿಕೊಡುವುದೇ ಈ ಸೆಂಟರ್‌ನ ವಿಶೇಷತೆ.

ಗಡಿಗಿ ಲಸ್ಸಿ ಮತ್ತು ಗೋಡಂಬಿ ಜ್ಯೂಸ್ ಅತ್ಯಂತ ಜನಪ್ರಿಯವಾಗಿವೆ. ಇವುಗಳಿಗಾಗಿಯೇ ದೂರದೂರಿನಿಂದ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ಎಳನೀರು ಕೂಡ ಇಲ್ಲಿನ ಮತ್ತೊಂದು ಆಕರ್ಷಣೆಯಾಗಿದೆ.

ಮಂತ್ರಿಗಳು, ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಈ ಜ್ಯೂಸ್ ಸೆಂಟರ್‌ನಿಂದಲೇ ಎಳನೀರು ಮತ್ತು ವಿವಿಧ ಬಗೆಯ ಜ್ಯೂಸ್‌ಗಳನ್ನು ತರಿಸಿಕೊಂಡು ಸೇವಿಸುವ ಪರಿಪಾಠವಿದೆ.

ಮಹಿಬೂಬ್ ಅವರು ಕೇವಲ ವ್ಯಾಪಾರದಲ್ಲಿ ಮಗ್ನರಾಗದೆ, ದೇಶ-ವಿದೇಶಗಳನ್ನು ಸುತ್ತುವುದರ ಜೊತೆಗೆ ದಾನ-ಧರ್ಮದ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್, ಪೆನ್ ವಿತರಿಸುವುದು, ಜಯಂತಿಗಳ ಸಂದರ್ಭದಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಸರಬರಾಜು ಮಾಡುವುದು, ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದು ಅವರ ಸ್ವಭಾವವಾಗಿದೆ.

ಇಂತಹ ಸೇವಾ ಮನೋಭಾವ ಹೊಂದಿರುವ ಮಹ್ಮದ್ ಮಹಿಬೂಬ್ ಅವರ ಸೇವೆಯನ್ನು ಗುರುತಿಸಿ, ಕಲಾ ಸಂಕುಲ ಸಂಸ್ಥೆಯು ನವೆಂಬರ್ 8ರಂದು ರಂಗಮಂದಿರದಲ್ಲಿ ನಡೆಯುವ ‘ದೇಸೀ ಸಂಭ್ರಮ’ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ.

ವ್ಯಾಪಾರದ ಜೊತೆಗೆ ಮನುಷ್ಯತ್ವವನ್ನೂ ಬೆಳೆಸಿಕೊಂಡಿರುವ ಮಹ್ಮದ್ ಮಹಿಬೂಬ್ ನಾಗುಂಡಿ ಅವರು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

“ಮಹ್ಮದ್ ಮಹಿಬೂಬ್ ಅವರ ಅಂಗಡಿ ಎಂದರೆ ನಮಗೆ ನಂಬಿಕೆ. ಎಳನೀರು ಬೇಕಾದರೂ, ಜ್ಯೂಸ್ ಬೇಕಾದರೂ ನಾವು ಮೊದಲು ನೆನಪಿಸಿಕೊಳ್ಳುವುದು ಲಿಮ್ರಾ ಜ್ಯೂಸ್ ಸೆಂಟರ್ ಅನ್ನೇ. ವ್ಯಾಪಾರದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಹೊಂದಿರುವ ವ್ಯಕ್ತಿ. ತಂದೆಯಿಂದ ಬಂದ ಗರಡಿ ಸಂಸ್ಕಾರವನ್ನು ಮಗ ಇಂದಿಗೂ ಉಳಿಸಿಕೊಂಡು ಬಂದಿದ್ದಾನೆ. ಗಡಿಗಿ ಲಸ್ಸಿ, ಗೋಡಂಬಿ ಜ್ಯೂಸ್ ಎಂದರೆ ದೇವದುರ್ಗದಲ್ಲೇ ಪ್ರಸಿದ್ಧ. ರಾಸಾಯನಿಕ ಬಳಸದೆ ಶುದ್ಧವಾಗಿ ತಯಾರಿಸಿಕೊಡುತ್ತಾರೆ ಎಂಬುದೇ ಇವರ ದೊಡ್ಡತನ.” — ಬಸವರಾಜ ಯಲ್ಲಪ್ಪ ಅಕ್ಕರಿಕಿ, ಯುವ ರಾಜಕಾರಣಿ.

“ಕೆಲಸಗಾರರನ್ನು ತಮ್ಮ ಕುಟುಂಬದವರಂತೆ ನೋಡಿಕೊಳ್ಳುವ ಮಾಲೀಕ. ತಮಗೆ ನಷ್ಟವಾದರೂ ಕೆಲಸಗಾರರ ಸಂಬಳಕ್ಕೆ ಮೋಸ ಮಾಡದ ಗುಣ ಈ ಕಾಲದಲ್ಲಿ ಅಪರೂಪ. ವ್ಯಾಪಾರದ ಜೊತೆಗೆ ಕನ್ನಡ, ಸಾಹಿತ್ಯ ಹಾಗೂ ದಾನ-ಧರ್ಮವನ್ನು ಬೆಳೆಸಿದ ಮಹ್ಮದ್ ಮಹಿಬೂಬ್ ನಾಗುಂಡಿ ಅವರಂತಹವರನ್ನು ಗುರುತಿಸುವುದು ನಮ್ಮ ಕರ್ತವ್ಯ. ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ.” — ಮಾರುತಿ ಬಡಿಗೇರ, ಕಲಾ ಸಂಕುಲ ಸಂಸ್ಥೆ, ರಾಯಚೂರು.