ಲಿಂಗಸುಗೂರು, ನ.6: ಯಾವುದೇ ಮಾನ್ಯತೆ ಪಡೆದ ವೈದ್ಯಕೀಯ ಪದವಿ ಅಥವಾ ಅರ್ಹತೆ ಇಲ್ಲದೆ ಸಾರ್ವಜನಿಕರಿಗೆ ತಾವು ವೈದ್ಯರೆಂದು ಬಿಂಬಿಸಿಕೊಂಡು ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯರ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಿ, ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಎಚ್ಚರಿಕೆ ನೀಡಿದ್ದಾರೆ.

ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ಇತ್ತೀಚೆಗೆ ವೈದ್ಯಕೀಯ ಪದವಿ ಪಡೆಯದೆ ಮನೆಯಲ್ಲಿಯೇ ಕ್ಲಿನಿಕ್ ನಡೆಸಿಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, ಸಂಬಂಧಪಟ್ಟ ಕ್ಲಿನಿಕ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಂಇ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಸಕ್ಷಮ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ವಿದ್ಯಾರ್ಹತೆ ಇಲ್ಲದಿದ್ದರೂ ತಾವು ವೈದ್ಯರೆಂದು ಹೇಳಿಕೊಂಡು ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂತಹ ಅನಧಿಕೃತ ಕ್ಲಿನಿಕ್‌ಗಳನ್ನು ಪತ್ತೆಹಚ್ಚಲು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಿರಂತರ ತಪಾಸಣೆ ಹಾಗೂ ದಾಳಿ ನಡೆಸಲಾಗುವುದು. ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ನಕಲಿ ವೈದ್ಯರ ವಿರುದ್ಧ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವರು ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸದೆ ಅಥವಾ ಖಾಸಗಿ ನರ್ಸಿಂಗ್ ಹೋಮ್‌ಗಳು, ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಲ್ಲಿ ಸ್ವಚ್ಛತಾ ಕಾರ್ಯ, ಗಾಯಗಳಿಗೆ ಪಟ್ಟಿ ಕಟ್ಟುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸಿದ ಅನುಭವದ ಆಧಾರದಲ್ಲಿ ತಾವೇ ವೈದ್ಯರೆಂದು ಹೇಳಿಕೊಂಡು ಚಿಕಿತ್ಸೆ ನೀಡುತ್ತಿರುವುದು ಕಂಡುಬರುತ್ತಿದೆ. ವೈದ್ಯಕೀಯ ವಿದ್ಯಾರ್ಹತೆ ಮತ್ತು ಅಗತ್ಯ ತರಬೇತಿ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಗಂಭೀರ ವಿಷಯವಾಗಿದ್ದು, ಇಂತಹ ಚಟುವಟಿಕೆಗಳಿಂದ ಸಾರ್ವಜನಿಕರ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಗ್ರಾಮೀಣ ಭಾಗದ ಸಾರ್ವಜನಿಕರು ವೈದ್ಯಕೀಯ ಸೇವೆ ಪಡೆಯುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಚಿಕಿತ್ಸೆ ನೀಡುವ ವ್ಯಕ್ತಿ ಮಾನ್ಯತೆ ಪಡೆದ ವೈದ್ಯಕೀಯ ಪದವಿ ಹಾಗೂ ಅಗತ್ಯ ನೋಂದಣಿ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಚಿಕಿತ್ಸೆ ಪಡೆಯಬೇಕು. ಕೇವಲ ಕ್ಲಿನಿಕ್ ಫಲಕ ಅಥವಾ ವೈದ್ಯರೆಂದು ಹೇಳಿಕೊಳ್ಳುವ ಮಾತನ್ನು ನಂಬಿ ಚಿಕಿತ್ಸೆ ಪಡೆಯಬಾರದು ಎಂದು ಸಲಹೆ ನೀಡಿದ್ದಾರೆ.

ಜಿಲ್ಲೆಯ ಯಾವುದೇ ಗ್ರಾಮ ಅಥವಾ ಪಟ್ಟಣದಲ್ಲಿ ವೈದ್ಯಕೀಯ ಅರ್ಹತೆ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆಗಳು ಎದುರಾದಾಗ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳು ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆ ಹೊಂದಿರುವ ವೈದ್ಯರು ಕಾರ್ಯನಿರ್ವಹಿಸುವ ಅಧಿಕೃತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು. ಅನಧಿಕೃತವಾಗಿ ಚಿಕಿತ್ಸೆ ನೀಡುವವರನ್ನು ಆಶ್ರಯಿಸದೆ ತಮ್ಮ ಆರೋಗ್ಯದ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಮನವಿ ಮಾಡಿದ್ದಾರೆ.

ಜಿಲ್ಲೆಯಾದ್ಯಂತ ನಕಲಿ ವೈದ್ಯರ ವಿರುದ್ಧ ತಪಾಸಣೆ ಮತ್ತು ಕಾನೂನು ಕ್ರಮ ಮುಂದುವರಿಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.